ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೊಂಡಿರುವ ಜನರಲ್ಲಿ ಕೂಡ ಕೊರೊನಾ ಸೋಂಕು ತಗುಲುತ್ತಿದ್ದು, ಲಕ್ಷಣ ಮಾತ್ರ ಸೌಮ್ಯವಾಗಿದೆ ಎಂದು ವರದಿಗಳು ತಿಳಿಸಿವೆ. ಈ ರೋಗಿಗಳು ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ ಹಾಗೂ ಚೇತರಿಸಿಕೊಳ್ಳುತ್ತಿದ್ದಾರೆ , ಆದರೆ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿರುವ ರೋಗಿಗಳಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕೊರೊನಾ ಸೋಂಕಿನಿಂದ 23 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಮೂವರು ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಓರ್ವ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದರೆ, ಉಳಿದವರು ಒಂದೇ ಒಂದು ಡೋಸ್ ಲಸಿಕೆಯನ್ನೂ ಪಡೆದಿರಲಿಲ್ಲ. ”ಲಸಿಕೆಯನ್ನು ಪಡೆದವರಿಗೆ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದೆ, ಎರಡೂ ಲಸಿಕೆ ಪಡೆದ 54 ವರ್ಷದ ವ್ಯಕ್ತಿಯೊಬ್ಬರಿಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು, ಒಂದು ಡೋಸ್ ಪಡೆದ ಉಳಿದ ಮೂವರು ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿದ್ದರು. ಸಾಮಾನ್ಯವಾಗಿ ಹೈಪೋಥೈರಾಯ್ಡಿಸಮ್ ಹೊಂದಿರುವ ಕೋವಿಡ್ ರೋಗಿಗಳು ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲಿ ಸಾವು ವಿಳಂಬವಾಗಬಹುದು ಆದರೆ ತಡೆಯಲಾಗುವುದಿಲ್ಲ” ಎಂದು ಜಯನಗರ ಜನರಲ್ ಆಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಸುಧಾ ತಿಳಿಸಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 30 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಪಡೆದ ಬಳಿಕವೂ ಸೋಂಕು ತಗುಲಿದೆ. ಅವರಲ್ಲಿ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಗುಣಮುಖರಾದರು. ಉಳಿದವರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು ಮತ್ತು ಆಸ್ಪತ್ರೆಗೆ ದಾಖಲಾಗಿಲ್ಲ, ಈ ಯಾವುದೇ ಪ್ರಕರಣಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.