ಎಟಿಎಂಗೆ ಹಾಕಬೇಕಿದ್ದ ₹1 ಕೋಟಿಗೂ ಅಧಿಕ ನಗದು ದೋಚಿ ಸಿಬ್ಬಂದಿ ಪರಾರಿ
ಬೆಂಗಳೂರು: ಎಟಿಎಂಗಳಿಗೆ ನಗದು ಡೆಪಾಸಿಟ್ ಮಾಡಬೇಕಿದ್ದ ಒಂದು ಕೋಟಿಗೂ ಅಧಿಕ ಹಣವನ್ನು ದೋಚಿ ಸಿಬ್ಬಂದಿಯೇ ಪರಾರಿಯಾದ ಘಟನೆ ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 400 ಕೋಟಿ ರೂ. ನಗದು ದರೋಡೆ ಪ್ರಕರಣದ ಕುರಿತ ಚರ್ಚೆ ತೀವ್ರವಾಗಿರುವ ನಡುವೆಯೇ, ಮತ್ತೊಂದು ದೊಡ್ಡ ನಗದು ಕಳವು ಪ್ರಕರಣ ಬಹಿರಂಗವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲ ಸಿಬ್ಬಂದಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋರಮಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ಗೆ ಸೇರಿದ ಒಂದು ಕೋಟಿಗೂ ಅಧಿಕ ನಗದನ್ನು ವಿವಿಧ ಎಟಿಎಂಗಳಿಗೆ ಜಮಾ ಮಾಡುವಂತೆ ಕಂಪನಿ ಅಧಿಕಾರಿ ಮಿಥುನ್ ಅವರು ಜನವರಿ 19ರಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಎಟಿಎಂಗಳಿಗೆ ಹಣ ಹಾಕಲು ಕಂಪನಿಯ ಎರಡು ಪ್ರತ್ಯೇಕ ತಂಡಗಳಿಗೆ ನಗದು ಹಂಚಿಕೆ ಮಾಡಲಾಗಿತ್ತು.
ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ವರುಣ್ ಎಂಬ ಸಿಬ್ಬಂದಿಗಳಿಗೆ ಎಟಿಎಂಗಳಿಗೆ ಹಣ ಜಮಾ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಆರೋಪಿಗಳು ನಿಗದಿತ ಎಟಿಎಂಗಳಿಗೆ ಹಣ ಜಮಾ ಮಾಡದೇ ನಗದಿನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಒಂದು ತಂಡವು ಸುಮಾರು 57 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದರೆ, ಮತ್ತೊಂದು ತಂಡವು ಸುಮಾರು 80 ಲಕ್ಷ ರೂ. ಹಣದೊಂದಿಗೆ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ಎಟಿಎಂಗಳಲ್ಲಿ ಹಣ ಜಮಾ ಆಗದಿರುವುದು ಗೊತ್ತಾದ ಬಳಿಕ ಕಂಪನಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಹಿಟಾಚಿ ಪೇಮೆಂಟ್ ಸರ್ವಿಸ್ ಕಂಪನಿ ಅಧಿಕಾರಿ ಮಿಥುನ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.






