ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮ ವಿಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, “ಭೈರಪ್ಪ ಅವರು ತಮ್ಮ ಬದುಕಿನ ಹೆಚ್ಚಿನ ಸಮಯವನ್ನು ಮೈಸೂರಿನಲ್ಲಿ ಕಳೆದಿದ್ದರು. ಮೈಸೂರು ಅವರ ನೆಚ್ಚಿನ ಸ್ಥಳವಾಗಿದ್ದರಿಂದ ಅಲ್ಲಿಯೇ ಸ್ಮಾರಕವನ್ನು ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಭೈರಪ್ಪ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ ನಂತರ, “ಭೈರಪ್ಪ ನನ್ನ ನೆಚ್ಚಿನ ಬರಹಗಾರರಲ್ಲಿ ಒಬ್ಬರು. ಅವರ ಹಲವಾರು ಕೃತಿಗಳನ್ನು ನಾನು ಓದಿದ್ದೇನೆ. ಅವರ ಕಾದಂಬರಿಗಳು ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡದ ಇತರ ಯಾವುದೇ ಸಾಹಿತಿಯ ಕೃತಿಗಳು ಇಷ್ಟು ಭಾಷೆಗಳಿಗೆ ಅನುವಾದಗೊಂಡಿಲ್ಲ,” ಎಂದು ಶ್ಲಾಘಿಸಿದರು.