ಐಪಿಎಲ್ ರದ್ದಾದರೂ ಹೋಟೆಲ್‌ನಲ್ಲಿಯೇ ಉಳಿದ ಧೋನಿ

1
87

ಕೊರೊನಾವೈರಸ್ ಎರಡನೇ ಅಲೆಯ ತೀವ್ರತೆಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೂಡ ನಲುಗಿದೆ. ಪ್ರಸ್ತುತ ಆವೃತ್ತಿಯ 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಮುಂದೂಡಿದೆ.

 

ಹೀಗಾಗಿ ಎಲ್ಲ ತಂಡಗಳ ಆಟಗಾರರು ಹೋಟೆಲ್‌ಗಳಿಂದ ತಮ್ಮ ಮನೆಗಳತ್ತ ಪಯಣವನ್ನು ಬೆಳೆಸಿದ್ದಾರೆ. ಹೀಗೆ ಆಟಗಾರರೆಲ್ಲಾ ಹೋಟೆಲ್‌ನಿಂದ ಹೊರಡುವ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಭೆಯೊಂದನ್ನು ನಡೆಸಿದೆ. ತಂಡದ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಆಟಗಾರರನ್ನೊಳಗೊಂಡ ಸಭೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಡೆಸಿದಾಗ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರು ಮತ್ತು ಸದಸ್ಯರ ಬಗ್ಗೆ ಯಾವ ಮಟ್ಟದ ಕಾಳಜಿಯನ್ನಿಟ್ಟುಕೊಂಡಿದ್ದಾರೆ ಎಂಬ ಸಂಗತಿ ತಿಳಿದು ಬಂದಿದೆ.

 

 

ಸಹ ಆಟಗಾರರ ಬಗ್ಗೆ ಯಾವಾಗಲೂ ಕಾಳಜಿಯನ್ನು ವಹಿಸುವ ಎಂಎಸ್ ಧೋನಿ ಮೊದಲು ವಿದೇಶಿ ಆಟಗಾರರು ನಂತರ ದೇಶೀಯ ಆಟಗಾರರು ಯಾವುದೇ ಸಮಸ್ಯೆಯಿಲ್ಲದೆ ಸುರಕ್ಷಿತವಾಗಿ ಹೊರಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕೊನೆಯಲ್ಲಿ ತಾನು ಹೊರಡುವುದಾಗಿ ಸಭೆಯಲ್ಲಿ ನಿರ್ಧಾರವನ್ನು ಕೈಗೊಂಡರು ಎಂದು ಚೆನ್ನೈ ತಂಡದ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ. ಚೆನ್ನೈ ತಂಡದ ಆಟಗಾರರು ಐಪಿಎಲ್ ಮುಂದೂಡಿಕೆಯಾದ ಸಮಯದಲ್ಲಿ ಡೆಲ್ಲಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದರು. ತಂಡದ ವಿವಿಧ ಆಟಗಾರರನ್ನು ಚೆನ್ನೈ ತಂಡದ ಮಾಲೀಕರು ಚಾರ್ಟರ್ ಫ್ಲೈಟ್‌ನ ಮೂಲಕ ಈಗಾಗಲೇ ಮನೆಗಳಿಗೆ ತಲುಪಿಸಿದ್ದು ಇಂದು ( ಗುರುವಾರ, ಮೇ 6 ) ಸಂಜೆ ಎಂಎಸ್ ಧೋನಿ ಅವರು ಹೋಟೆಲ್‌ನಿಂದ ಹೊರಡಲಿದ್ದಾರೆ.

 

ಇನ್ನು ಪ್ರಸ್ತುತ ಐಪಿಎಲ್ ಮುಂದೂಡಲ್ಪಟ್ಟ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಉತ್ತಮ ಹಂತದಲ್ಲಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿ ಯಶಸ್ವಿಯಾಗಿ ಗೆಲುವಿನ ಹಾದಿಗೆ ಮರಳಿದೆ.

 

1 COMMENT

LEAVE A REPLY

Please enter your comment!
Please enter your name here