14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಲೀಗ್ ಹಂತದ 17 ಪಂದ್ಯಗಳು ಮುಗಿದಿವೆ. ಲೀಗ್ ಹಂತದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿನ ಆಟಗಾರರ ಅತ್ಯುತ್ತಮ ಪ್ರದರ್ಶನದ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಹಿರಿಯ ಆಟಗಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2021ರ ಕುರಿತು ಇದುವರೆಗೂ ಸಹ ಯಾವುದೇ ಅಪಸ್ವರ ಕೇಳಿ ಬಂದಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಕೈ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ಐಪಿಎಲ್ ಪಂದ್ಯಗಳು ನಡೆಯಲು ಆಯೋಜಿಸಲಾಗಿರುವ ಪಿಚ್‌ಗಳ ಬಗ್ಗೆ ಬೆನ್ ಸ್ಟೋಕ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಪಂದ್ಯಗಳೆಂದರೆ ತಂಡವೊಂದು ಕನಿಷ್ಠ 160 ರಿಂದ 170 ರನ್ ಗಳಿಸಬೇಕೇ ಹೊರತು 130 ರಿಂದ 140 ರನ್‌ಗಳಿಗೆ ಬಹುತೇಕ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಅಂತ್ಯಗೊಳಿಸುವ ರೀತಿ ಇರಬಾರದು ಎಂದು ಬೆನ್ ಸ್ಟೋಕ್ಸ್ ಟ್ವೀಟ್ ಮೂಲಕ ಐಪಿಎಲ್ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭದ ಪಂದ್ಯಗಳು ಮುಂಬೈ ಮತ್ತು ಚೆನ್ನೈನಲ್ಲಿ ನಡೆಯುತ್ತಿದ್ದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳಲ್ಲಿ ರನ್‌ಗಳು ಹೆಚ್ಚಾಗಿಯೇ ಬರುತ್ತಿವೆ, ಆದರೆ ಚೆನ್ನೈನ ಸ್ಟೇಡಿಯಂನಲ್ಲಿ ಮಾತ್ರ 150ರ ಗಡಿ ದಾಟುವುದು ಕೂಡ ಕಷ್ಟವಾಗಿದೆ. ಚೆನ್ನೈ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ ಮತ್ತು ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಬೆನ್ ಸ್ಟೋಕ್ಸ್ ಅವರು ಪಿಚ್ ಕುರಿತು ಮಾಡಿರುವ ಟ್ವೀಟ್ ಚೆನ್ನೈ ಪಿಚ್‌ನ್ನು ಪರೋಕ್ಷವಾಗಿ ಟೀಕಿಸುವುದರ ಮೂಲಕ ಐಪಿಎಲ್ ಪಿಚ್‌ಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.