ಒಂದೇ ಕುಟುಂಬದ 6 ಮಂದಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತಪಟ್ಟವರನ್ನು ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಎಂದು ಗುರುತಿಸಲಾಗಿದೆ.
ಶಹಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಶಾಮಕದಳ ಮತ್ತು ಗ್ರಾಮದ ನುರಿತ ಈಜುಗಾರರಿಂದ ಶವಗಳನ್ನು ಪತ್ತೆ ಮಾಡಲಾಗಿದೆ. ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ ಭೇಟಿ ನೀಡಿದರು.
ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಭೀಮರಾಯ ಸುರಪುರ ಕೃಷಿಗಾಗಿ ಖಾಸಗಿಯವರಿಂದ ಸಾಲ ಪಡೆದಿದ್ದ. ಸಾಲ ತೀರಿಸಲು ಸಾಧ್ಯವಾಗದ ಕಾರಣ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದವರನ್ನು ಸಹ ಕೃಷಿ ಹೊಂಡಕ್ಕೆ ತಳ್ಳಿದ್ದಾನೆ. ಮಕ್ಕಳ ಕಾಲಿಗೆ ಕಲ್ಲು ಕಟ್ಟಲಾಗಿದೆ.
ಎಸ್ಪಿ ವೇದಮೂರ್ತಿ, ಎಸಿ ಪ್ರಶಾಂತ್ ಹನಗಂಡಿ, ತಹಶೀಲ್ದಾರ್ ಜಗನ್ನಾಥ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.