ಜಗತ್ತು ಎಷ್ಟೇ ಆಧುನಿಕತೆಯತ್ತ ವಾಲಿದ್ರು ಕೆಲವೊಂದಿಷ್ಟು ನಿರ್ಧಾರಗಳು ಮಾತ್ರ ಬದಲಾಗೋದಿಲ್ಲ. ಯಾಕಂದ್ರೆ ಮನೆ ಕೇವಲ ನಾವು ವಾಸ ಮಾಡುವ ಸ್ಥಳವಷ್ಟೇ ಅಲ್ಲ. ನಮಗೆ ನೆಲೆಕೊಟ್ಟ ಪೂರ್ವಿಕರು ಬಾಳಿ ಬದುಕಿದ ಸೂರು, ಆ ಜಾಗ ತುಂಬಾನೇ ಮಹತ್ವವನ್ನ ಪಡೆದುಕೊಳ್ಳುತ್ತೆ. ಅದರೊಂದಿಗೆ ನಮ್ಮ ಭಾವನಾತ್ಮಕ ಸಂಬಂಧಗಳು ಬೆಸೆದುಕೊಂಡಿರುತ್ತವೆ. ಅಂತಹ ಜಾಗವನ್ನ ಮಾರುವುದಕ್ಕಾಗಲಿ, ಇನ್ನೊಬ್ಬರಿಗೆ ಬಿಟ್ಟು ಕೊಡುವುದಾಗಲಿ ಯಾವೊಬ್ಬ ವ್ಯಕ್ತಿಯು ಮಾಡಲು ಮುಂದಾಗೋದಿಲ್ಲ. ಅಂತಹ ಭಾವನಾತ್ಮಕತೆಗೆ ವಿಖ್ಯಾತವಾದ ಒಂದಿಷ್ಟು ನಿದರ್ಶನಗಳು ಇಲ್ಲಿವೆ ನೋಡಿ.ಮೊದಲನೇ ಘಟನೆ, ಆ ವ್ಯಕ್ತಿ ಹೆಸರು ಆಸ್ಟಿನ್ ಪ್ರಿಗ್ಸ್ ಅಂತ, ಡೌನ್ ಟೌನ್ ವಾಷಿಂಗ್ಟನ್ ನಲ್ಲಿ ಆಸ್ತಿಗಳ ಬೆಲೆ ಆಕಾಶವನ್ನು ಮುಟ್ಟುವಂತೆ ಇದ್ದಂತಹ ದಿನಗಳು ಅವು, ಆಗ ಆಸ್ಟಿನ್ ಪ್ರಿಗ್ಸ್ ಎನ್ನುವ ವ್ಯಕ್ತಿಯಿಂದ ಬಿಲ್ಡರ್ಸ್ ಮನೆ ಖರೀದಿ ಮಾಡಿ ಅಲ್ಲಿ ಆಫೀಸ್ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಅದಕ್ಕಾಗಿ ಅವರು ಮಿಲಿಯನ್ ಗಟ್ಟಲೆ ಹಣವನ್ನು ಆಸ್ಟಿನ್ ಗೆ ಆಫರ್ ನೀಡಿದರು. ಆದರೆ ಆಸ್ಟಿನ್ ಯಾವುದೇ ಕಾರಣಕ್ಕೂ ತನ್ನ ಮನೆ ಮಾರಲು ಒಪ್ಪಲೇ ಇಲ್ಲ. ಅಲ್ಲದೇ ತಾನೇ ಪಿಜ್ಜಾ ಪಾರ್ಲರ್ ತೆರೆಯೋ ಪ್ಲಾನ್ ಮಾಡಿದ್ದ. ಆದರೆ ನಾಲ್ಕು ವರ್ಷಗಳ ನಂತರ ಪರಿಸ್ಥಿತಿ ಭಿನ್ನವಾಗಿತ್ತು.
ಆಸ್ಟಿನ್ ಮನೆಯ ಮೂರು ದಿಕ್ಕಿನಲ್ಲಿ ಎತ್ತರದ ಕಟ್ಟಡಗಳು ಸುತ್ತವರೆದಿದ್ದವು, ಆಸ್ಟಿನ್ ಪಿಜ್ಜಾ ಪಾರ್ಲರ್ ತೆರೆಯಲೇ ಇಲ್ಲ. ಕಡೆಗೆ ಆತ ಮನೆ ಮಾರಲು ನಿರ್ಧರಿಸಿ, ತಾನು ಮನೆಗೆ ನಿಗಧಿ ಮಾಡಿದ ಹಣ 1.5 ದಶಲಕ್ಷ ಡಾಲರ್, ಅದು ಈ ಹಿಂದೆ ಬಿಲ್ಡರ್ ಗಳು ಅವನಿಗೆ ಆಫರ್ ನೀಡಿದ್ದ ಬೆಲೆಯಲ್ಲಿ ಅರ್ಧ ಮಾತ್ರ. ನಂತರ 2011 ರಲ್ಲಿ ಈ ಮನೆಯನ್ನು ಕೇವಲ ಏಳೂವರೆ ಲಕ್ಷ ಡಾಲರ್ ಗೆ ಮಾರಾಟ ಮಾಡಬೇಕಾಯಿತು ಆಸ್ಟಿನ್.ಎರಡನೆಯದಾಗಿ ಚೀನಾದ ಇಷಾಯಿ ನಗರದಲ್ಲಿ ಇರುವ ಮೂರು ಅಂತಸ್ತಿನ ಮನೆಯ ಸುತ್ತ ಮುತ್ತ ಜಾಗವನ್ನು ನೋಡಿದರೆ ಬಹುಶಃ ಇಲ್ಲಿ ಬಾಂಬ್ ಸ್ಪೋಟಗೊಂಡು ಎಲ್ಲಾ ಹಾಳಾಗಿದ್ದು ಈ ಮನೆ ಮಾತ್ರ ಉಳಿದುಕೊಂಡಿದೆಯಾ? ಎನ್ನುವ ಅನುಮಾನ ಬರುತ್ತೆ. ಆದರೆ ವಿಷಯ ಅದಲ್ಲ. ಇಲ್ಲಿ ಸರ್ಕಾರದ ಪ್ರಾಜೆಕ್ಟ್ ಒಂದರ ಸಲುವಾಗಿ ಕಾರ್ಯ ಶುರುವಾದಾಗ ಈ ಮನೆಯ ಮಾಲಿಕ ಯೆಂಗ್ ಮನೆ ಮಾರಲಿಲ್ಲ. ಇದರಿಂದ ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ತಡೆಯಾಯಿತು. ಕಂಟ್ರಾಕ್ಟರ್ ಗಳು ಆ ಮನೆಯ ಸುತ್ತಲೂ ಕೆಸರಿನ ದೊಡ್ಡ ಹಳ್ಳವನ್ನೇ ತೆಗೆದರು, ಸರ್ಕಾರ ಎರಡು ವರ್ಷಗಳ ಕಾಲ ಯಂಗ್ ದಂಪತಿಯ ಮನವೊಲಿಸುವ ಎಲ್ಲಾ ಪ್ರಯತ್ನ ಮಾಡಿದರೂ ಅವರಿಗೆ ಅದು ಒಪ್ಪಿಗೆಯಾಗಲಿಲ್ಲ.
ಸುತ್ತ ಮುತ್ತಲಿನ ಬಿಲ್ಡರ್ಸ್ ಯೆಂಗ್ ದಂಪತಿ ಮನೆಗೆ ನೀರು ಹಾಗೂ ವಿದ್ಯುತ್ ಸೌಲಭ್ಯ ಕಡಿತ ಮಾಡಿದರು. ಆಗ ವಿಧಿಯಿಲ್ಲದೇ ದಂಪತಿ ಮನೆ ಖಾಲಿ ಮಾಡಿದರಾದರೂ ಅವರು ಮತ್ತೆ ಆ ಮನೆಗೆ ಬಂದರು, ಮನೆಗೆ ನೀರನ್ನು ಒಂದು ಕಿಮೀ ದೂರದಿಂದ ತರುವ ಅವರು ವಿದ್ಯುತ್ ಬದಲಿಗೆ ಮೇಣದ ಬತ್ತಿ ಬಳಸಿ ಜೀವನ ಮಾಡುತ್ತಿದ್ದಾರೆಯೇ ಹೊರತು ಮನೆ ಖಾಲಿ ಮಾಡಲು ಸಿದ್ಧರಿಲ್ಲ.ಮೂರನೆಯದು ಚೀನಾದ ಮೋಟಾರ್ ಹೈವೇ. ಇಲ್ಲಿ ಈ ರಸ್ತೆಯನ್ನು ಎರಡಾಗಿ ವಿಭಜನೆ ಮಾಡಲಾಗಿದೆ. ಇದಕ್ಕೆ ಕಾರಣ ಆ ರಸ್ತೆ ನಿರ್ಮಾಣದ ಹಾದಿಯಲ್ಲಿದ್ದ ಮನೆಯೊಂದರ ಮಾಲೀಕ ತನ್ನ ಮನೆ ಮಾರಲು ಒಪ್ಫಲಿಲ್ಲ. ಈ ಮನೆ ಮಾಲೀಕ ಶಾಂಗೈ ನಗರದ ಲೋಟುಹೈ ಕ್ಷೇತ್ರದ ನಿವಾಸಿಯಾಗಿದ್ದಾರೆ. ಆತ ಮನೆ ಮಾರದ ಕಾರಣ ರಸ್ತೆಯನ್ನು ಮನೆಯ ಸುತ್ತಲೂ ಹಾದು ಹೋಗುವ ಹಾಗೆ ನಿರ್ಮಾಣ ಮಾಡಲಾಗಿದ್ದು, ವಾಹನಗಳು ಕೂಡಾ ಈ ಮನೆಯನ್ನು ಸುತ್ತಿ ಹೋಗಬೇಕಾಗಿದೆ. ಈ ಮನೆ ಮಾಲಿಕ ಸರಿಯಾದ ಒಂದು ನಿರ್ಧಾರ ಮಾಡುವ ವರೆಗೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ.
ನಾಲ್ಕನೆಯದು, ಸಿಯಾಟಲ್ ನಗರದಲ್ಲಿ ಒಂದು ಮಾಲ್ ನಿರ್ಮಾಣ ಮಾಡಲಾಗಿದೆ. ಈ ಮಾಲ್ ನಗರದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಈ ಮಾಲ್ ನ ಮಧ್ಯ ಭಾಗದಲ್ಲಿ ಒಂದು ಹಾಲ್ ಇದ್ದು, ಅಲ್ಲಿ ನೋಡಿದಾಗ ಆಶ್ಚರ್ಯ ಅನ್ನೋತರ ಒಂದು ಮನೆ ಕಾಣುತ್ತದೆ. ಮಾಲ್ ನಿರ್ಮಾಣ ಮಾಡುವಾಗ ಬಿಲ್ಡರ್ಸ್ ಬುಲ್ಡೋಜರ್ ಮತ್ತು ಹಣದೊಂದಿಗೆ ಇಲ್ಲಿಗೆ ಬಂದಾಗ ಆ ಮನೆಯಲ್ಲಿ ಒಬ್ಬ ಅಜ್ಜಿ ವಾಸವಾಗಿದ್ದರು. ಅಜ್ಜಿಗೆ ಹಣ ಕೊಡಲು ಮುಂದಾದರಾದರೂ ಅಜ್ಜಿ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ಬೇರೆ ದಾರಿಯಿಲ್ಲದೇ ಮನೆಯನ್ನು ಹಾಗೇ ಬಿಟ್ಟು ಮಾಲ್ ನಿರ್ಮಾಣ ಮಾಡಲಾಯಿತು. ಅಲ್ಲದೇ ಆಕೆಗೆ ಮಾಲ್ ಮಾಲೀಕನ ಜೊತೆ ಒಳ್ಳೆ ಸ್ನೇಹವಾಗಿ, ಆತನೇ ಮುದುಕಿಯ ಜೀವನಕ್ಕೆ ನೆರವಾದರು. ಮುಂದೆ 87 ವರ್ಷ ವಯಸ್ಸಿನಲ್ಲಿ ಆಕೆ ನಿಧನಳಾದ ಮೇಲೆ ಆ ಮನೆ ಮಾಲ್ ಮಾಲೀಕನ ಹೆಸರಿಗಾಯಿತಾದರೂ ಆತ ಮನೆಯನ್ನು ಕೆಡವಲಿಲ್ಲ.ಕೊನೆಯದಾಗಿ ಒಂದು ಒಂಟಿ ಮನೆ ಹೈವೇ ಮಧ್ಯದಲ್ಲಿ ಇದೆ. ಈ ಮನೆ ಮಾಲಿಕ ಲುವೋ ಬೊವ್ಜನ್. ಲುವೋ ತಮ್ಮ ಪತ್ನಿಯ ಜೊತೆ ವಿನ್ಲಾನ್ ನಗರ ಚೀನಾದಲ್ಲಿ ವಾಸಿಸುತ್ತಾರೆ. ಇವರಿದ್ದ ಕಡೆ ಹೈವೇ ನಿರ್ಮಾಣವಾಗಲಿದೆ ಎಂದಾಗ ಸುತ್ತ ಮುತ್ತಲಿನ ಜನರೆಲ್ಲರೂ ಕೂಡಾ ತಮ್ಮ ಸ್ಥಳವನ್ನು ಮಾರಾಟ ಮಾಡಿದರು. ಆದರೆ ಈ ದಂಪತಿ ಮಾತ್ರ ಅದಕ್ಕೆ ಒಪ್ಪಲಿಲ್ಲ. ತಮ್ಮ ಮನೆಗೆ ನೀಡುತ್ತಿರುವ ಬೆಲೆ ಸೂಕ್ತವಲ್ಲ ಎಂದು ಆ ದಂಪತಿ ಮನೆಯನ್ನು ಬಿಡಲಿಲ್ಲ. ಆದರೆ ರಸ್ತೆ ನಿರ್ಮಾಣ ಮಾಡುವಾಗ ಸುತ್ತ ಮುತ್ತಲ ಕಟ್ಟಡಗಳನ್ನು ಕೆಡವುವಾಗ ಲುವೋ ಅವರ ಮನೆಗೂ ಡ್ಯಾಮೇಜ್ ಆಯ್ತು. ಆದರೂ ಅವರು ಮನೆ ಖಾಲಿ ಮಾಡಲಿಲ್ಲ. ಅದಕ್ಕೆ ಇಂದಿಗೂ ಆ ಮನೆ ರಸ್ತೆಯ ಮಧ್ಯೆ ಇದೆ.
ಅಂದಹಾಗೆ ಜಗತ್ತಿನಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಇರಲು ಸಾಧ್ಯವಿಲ್ಲ ಒಬ್ಬೋಬ್ಬರ ಅಭಿಪ್ರಾಯ ಭಿನ್ನವಾಗಿರುತ್ತೆ ಅನ್ನೋದಕ್ಕೆ ಈ ಮೇಲಿನ ನಿದರ್ಶನಗಳೇ ಸಾಕ್ಷಿ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಮನೆಗಳ ಜೊತೆ ಇಟ್ಟಿರೋ ಭಾವನಾತ್ಮಕ ಸಂಬಂಧ ಅಂದ್ರೆ ತಪ್ಪಾಗೋದಿಲ್ಲ.