ಜಪಾನ್‌ನ ಸ್ಟಾರ್ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಸಿಂಗಲ್ಸ್ ಟೆನಿಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋತಿದ್ದಾರೆ. ಝೆಕ್ ರಿಪಬ್ಲಿಕ್ ಆಟಗಾರ್ತಿ ಮಾರ್ಕೆಟಾ ವೊಂಡ್ರೊಸೊವಾ ವಿರುದ್ಧ ಒಸಾಕಾ ನೇರಸೆಟ್ ಸೋಲು ಕಂಡಿದ್ದಾರೆ.
ಮಂಗಳವಾರ (ಜುಲೈ 027) ನಡೆದ ಪಂದ್ಯದಲ್ಲಿ ನವೋಮಿ ಒಸಾಕಾ ಅವರು ಮಾರ್ಕೆಟಾ ವೊಂಡ್ರೊಸೊವಾ ಎದುರು 1-6, 4-6ರ ಸೋಲನುಭವಿಸಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆತಿಥೇಯ ದೇಶಕ್ಕೆ ಬಂಗಾರ ಗೆಲ್ಲುವ ಒಸಾಕಾ ಕನಸು ಭಗ್ನವಾಗಿದೆ.
ಅರಿಯಕೆ ಟೆನಿಸ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಒಸಾಕ ಹಲವಾರು ತಪ್ಪುಗಳನ್ನು ಮಾಡಿ ಪಂದ್ಯ ಕಳೆದುಕೊಂಡಿದ್ದಾರೆ. ವಿಶ್ವ ನಂ.2 ಆಟಗಾರ್ತಿ ಒಸಾಕ ಅವರು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಆರಂಭೋತ್ಸವದ ವೇಳೆ ಕ್ರೀಡಾ ಜ್ಯೋತಿಗೆ ಅಗ್ನಿ ಸ್ಪರ್ಶಿಸಿ ಜಾಗತಿಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದ್ದರು.
2019ರ ಫ್ರೆಂಚ್ ಓಪನ್ ನಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದ ವೊಂಡ್ರೊಸೊವಾ ಅವರು ಒಸಾಕಾಗಿಂತ ಹೆಚ್ಚು ಆತ್ಮವಿಶ್ವಾಸದ ಆಟವಾಡಿ ಫಲಿತಾಂಶ ತನ್ನದಾಗಿಸಿಕೊಂಡಿದ್ದಾರೆ.