ಸಿದ್ದರಾಮಯ್ಯ ಬಜೆಟ್ ಸಮಗ್ರ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್

0
107

ಸಿದ್ದರಾಮಯ್ಯ ಬಜೆಟ್ ಸಮಗ್ರ ಅಭಿವೃದ್ಧಿಗೆ ದಾರಿ: ಸಚಿವ ಎಂ.ಬಿ ಪಾಟೀಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯ ಸಮಗ್ರ ದೃಷ್ಟಿಕೋನವನ್ನು ಪ್ರತಿಫಲಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಈ ಬಜೆಟ್ ಉಜ್ವಲ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಗಾತ್ರವನ್ನು 4.48 ಲಕ್ಷ ಕೋಟಿ ರೂಪಾಯಿಗೆ ಏರಿಸಿರುವುದು ರಚನಾತ್ಮಕ ಕ್ರಮವಾಗಿದ್ದು, ಅದಕ್ಕೆ ತಕ್ಕಂತೆ ಬಂಡವಾಳ ವೆಚ್ಚವನ್ನೂ ಘೋಷಿಸಲಾಗಿದೆ ಎಂದರು.

ಈ ಕ್ರಮಗಳು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದರ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ರೈತ ಕಲ್ಯಾಣ, ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿದೆ. ಇದರಿಂದ ಸುಸ್ಥಿರ ಬೆಳವಣಿಗೆಗೆ ದಾರಿ ತೆರೆಯಲಿದೆ ಎಂದು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಭೂಸ್ವಾಧೀನಕ್ಕಾಗಿ ಪ್ರತಿ ಎಕರೆ ಕೃಷಿ ಜಮೀನಿಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸಿರುವುದು ರೈತರಿಗೆ ಸಂದ ಜಯವಾಗಿದೆ ಎಂದು ಅವರು ಹೇಳಿದರು.