ಒಂದು ಸಾಮಾನ್ಯ ಕುಟುಂಬದಿಂದ ಬಂದು ಇಂದು ಅಸಾಧರಣ ಸಾಧನೆ ಮಾಡಿರುವವರು ಬೇರಾರೂ ಅಲ್ಲ ಖ್ಯಾತ ಉದ್ಯಮಿ ಮಧುಸೂದನ್ ರಾವ್ ಅವರು. ದೇಶದ ಪ್ರತಿಷ್ಠಿತ ಎಂಎಂಆರ್ ಗ್ರೂಪ್ ಆಫ್ ಕಂಪನಿಯ ಸಂಸ್ಥಾಪಕರು ಹಾಗೂ ನಿರ್ದೇಶಕರು. ಟೆಲಿಕಾಂ, ಐಟಿ, ಇಲೆಕ್ಟ್ರಿಕಲ್,ಮೆಕ್ಯಾನಿಕಲ್,ಆಹಾರ ಸಂಸ್ಕರಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕಂಪನಿ ತೆರೆದಿದ್ದಾರೆ. ಈ ಕಂಪನಿಗಳು ಉತ್ತಮ ಕೆಲಸದ ಜೊತೆಗೆ ಲಾಭ ಪಡೆಯುತ್ತಿವೆ.
ಮಧುಸೂದನ್ ರಾವ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಲಕುರು ಗ್ರಾಮದಲ್ಲಿ ಜನಿಸಿದ್ರು. ತಂದೆ ಪೆರ್ಯಾ ಹಾಗೂ ತಾಯಿ ರಾಮುಲಮ್ಮ. ಸಾಕಷ್ಟು ಕಷ್ಟ,ಅವಮಾನ,ನೋವುಗಳನ್ನು ಎದುರಿಸಿ ಈ ಹಂತಕ್ಕೆ ಬಂದಿದ್ದಾರೆ. ತಾವು ತಮ್ಮ ಬದುಕಿನಲ್ಲಿ ಎದುರಿಸಿದ ಕಷ್ಟನಷ್ಟಗಳನ್ನ, ಬದುಕು-ಬವಣೆಗಳನ್ನ ಧೈರ್ಯವಾಗಿ ಮೆಟ್ಟಿನಿಂತು ಸಾಧಕರಾಗಿದ್ದಾರೆ.
ಮಧುಸೂದನ್ ರಾವ್ ಪಾಲಕರು ಮೊದಲು 10 ಮಂದಿ ಮಕ್ಕಳ ಜೊತೆ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದರು. ಅವರ ಅಪ್ಪ ಭೂಮಾಲೀಕರೊಬ್ಬರ ಕೈನಲ್ಲಿ ಬಂಧಿಯಾಗಿದ್ದರು. ಜೀತದಾಳುವಾಗಿ ದುಡಿಯುತ್ತಿದ್ದರಂತೆ. ತಾಯಿ ತಂಬಾಕು ಕಾರ್ಖಾನೆಗೆ ಹೋಗ್ತಾ ಇದ್ದರು. ಅಲ್ಲಿ ಅವರಿಗೆ ಸಂಬಳ ಸಿಗ್ತಾ ಇತ್ತು. ಆದರೆ, ದುಡಿಮೆ ಹಣ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ..ಅಷ್ಟೊಂದಿತ್ತು ಬಡತನ..
ಈ ನಡುವೆಯೇ ಮಧುಸೂದನ್ ರಾವ್ ಕುಟುಂಬ ಹಿಂದುಳಿದ ಜಾತಿಗೆ ಸೇರಿತ್ತು. ಊರಿನಲ್ಲಿ ಅಸ್ಪೃಶ್ಯತೆ ತಾಂಡವ ವಾಡ್ತಾ ಇತ್ತು. ಇವರನ್ನು ಯಾರೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಹಿಂದುಳಿದ ಜಾತಿಯಾಗಿದ್ದರಿಂದ ಇವರ ಮುಖ ನೋಡುವುದು ಅಪಶಕುನ ಎಂದು ಕೆಲವರು ಭಾವಿಸಿದ್ದರು. ಅಂತಹ ವಾತಾವರಣದಲ್ಲಿ ಅವರ ಕುಟುಂಬವಿತ್ತು.
ಇನ್ನು ಮಧುಸೂದನ್ ಮತ್ತು ಅವರ ಅಣ್ಣ ಇಬ್ಬರೂ ಸರ್ಕಾರಿ ಶಾಲೆಗೆ ಹೋಗುತ್ತಿದ್ದರಂತೆ. ಓದುವುದರಲ್ಲಿ ಚುರುಕಿದ್ದ ಮಧುಸೂದನ್ ದಿನಕಳೆದಂತೆ ಸಾಕಷ್ಟು ವಿಚಾರಗಳನ್ನು ಕಲಿತರಂತೆ. ಊಟ ಮತ್ತು ಬಟ್ಟೆಗೆ ಕೊರತೆ ಇದಿದ್ದರಿಂದ ಊರಿನ ಪಕ್ಕದಲ್ಲೇ ಇದ್ದ ಗವರ್ನಮೆಂಟ್ ಹಾಸ್ಟೆಲೊಂದಕ್ಕೆ ಸೇರಿಸಿದ್ದರಂತೆ. ಅಲ್ಲೇ ಇದ್ದು ಸ್ಕೂಲ್, ಡಿಪ್ಲೋಮಾ ಮುಗಿಸಿದ್ರು.
ಆಮೇಲೆ ಕೆಲಸಕ್ಕೆ ಹುಡುಕಾಟಕ್ಕೆ ಶುರುಮಾಡಿದ್ರು. ಮಧುಸೂದನ್ ಕೆಲಸಕ್ಕಾಗಿ ಅನೇಕ ಕಡೆ ಅರ್ಜಿ ಹಾಕಿದ್ದರು. ಕೆಲವು ಕಡೆ ಹೋಗಿ ಬಂದ್ರು. ಎಲ್ಲಿಯೂ ನೌಕರಿ ಮಾತ್ರ ಸಿಗಲಿಲ್ಲ. ಕೆಲವೆಡೆ ರೆಫರೆನ್ಸ್ ಕೇಳಿದ್ರೆ. ಮತ್ತೆ ಕೆಲವು ಕಡೆ ಮನೆಯಲ್ಲಿರುವವರು ಅನಕ್ಷರಸ್ಥರು ಎನ್ನುವ ಕಾರಣಕ್ಕೆ ಅವರಿಗೆ ನೌಕರಿ ನೀಡಲಿಲ್ಲ. ಕೊನೆಗೆ ಹೈದ್ರಾಬಾದಿನಲ್ಲಿದ್ದ ಅಣ್ಣನೊಂದಿಗೆ ಹೋಗಿ ಕೂಲಿ ಕೆಲಸ ಮಾಡಲು ಶುರುಮಾಡಿದರು.
ಅಲ್ಲಿ ಮಾಡುತ್ತಿದ್ದ ಕೆಲಸವೇನು ಗೊತ್ತು..!! ಕಟ್ಟಡ ಕಟ್ಟಲು ಕಲ್ಲು ಒಡೆಯುವುದು, ಸಿಮೆಂಟ್, ಮರಳನ್ನು ತಂದು ಕೊಡುವುದು, ಕಟ್ಟಡಕ್ಕೆ ನೀರು ಹಾಕುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿದ್ರು. ಅವರಿಗೆ ಈ ಕೆಲಸ ಮಾಡಿದ್ರೆ ದಿನವೊಂದಕ್ಕೆ 50 ರೂಪಾಯಿ ಸಿಗ್ತಾ ಇತ್ತು. ರಾತ್ರಿ ಕೆಲಸ ಮಾಡಿದ್ರೆ ನೂರು ರೂಪಾಯಿ ಸಿಗ್ತಾ ಇತ್ತು. ಹಾಗಾಗಿ ರಾತ್ರಿ ಕೂಡ ಕೆಲಸ ಮಾಡಲು ಶುರುಮಾಡಿದರು. ವಾಚ್ ಮನ್ ಆಗಿಯೂ ಮಧುಸೂದನ್ ಕೆಲಸ ಮಾಡಿದ್ರು.
ನೋಡಿ, ಅವರ ಪ್ರಾಮಾಣಿಕತೆ ಹಾಗೂ ಕೆಲಸದ ಮೇಲಿನ ನಿಷ್ಠಯೇ ಅವರಿಗೆ ಹೊಸ ಮಾರ್ಗ ತೋರಿಸಿತ್ತು. ಒಂದು ದಿನ ಟೆಲಿಫೋನ್ ಕಂಬಕ್ಕಾಗಿ ಹೊಂಡ ತೆಗೆಯುತ್ತಿದ್ದ ವೇಳೆ ಎಂಜಿನಿಯರೊಬ್ಬರು ಅಲ್ಲಿಗೆ ಬಂದ್ರು. ನೀನು ಓದಿದ್ದೀಯಾ ಎಂದು ಕೇಳಿದ್ರು. ಹೌದು ಪಾಲಿಟೆಕ್ನಿಕ್ ಡಿಪ್ಲೊಮಾ ಮುಗಿಸಿದ್ದೇನೆ ಎಂದಿದಕ್ಕೆ ಕೆಲಸಕ್ಕೆ ಬನ್ನಿ ಎಂದೇಬಿಟ್ಟರಂತೆ. ಆದರೆ, ಗುತ್ತಿಗೆದಾರ ಮಧ್ಯೆ ನಡೆದ ಜಗಳದಲ್ಲಿ ಸಿಕ್ಕಿದ ಕೆಲಸವೂ ಕೈ ತಪ್ಪಿತು.
ಆಗ ಗುತ್ತಿಗೆಯಿಂದ ಶುರುವಾದ ಇವರ ಉದ್ಯಮ, ಇದು ಐಟಿ,ಆಹಾರ ಸಂಸ್ಕರಣಾ ಕ್ಷೇತ್ರ ಸೇರಿದಂತೆ 20 ಕ್ಷೇತ್ರಗಳಲ್ಲಿ ಕಂಪನಿಗಳ ಮಾಲೀಕರಾಗಿರುವ ಮಟ್ಟಿಗೆ ಬಂದು ನಿಂತಿದೆ. ಮಧುಸೂದನ್ ಅವರು ಹೆಸರು ಈಗ ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಆಂಧ್ರಪ್ರದೇಶ ಶಾಖೆಯ ಅಧ್ಯಕ್ಷರು ಕೂಡ ಅವರು.
ಪ್ರಧಾನಿ ಸೇರಿದಂತೆ ಅನೇಕ ಗಣ್ಯರಿಂದ ಶಭಾಷ್ ಗಿರಿ ಪಡೆದಿದ್ದಾರೆ. ಗುಡಿಸಲಿನಲ್ಲಿದ್ದ ಮಧುಸೂದನ್ ರಾವ್ ಬಂಗಲೆಯಲ್ಲಿದ್ದಾರೆ. ಮನೆಯಲ್ಲಿ 65 ಮಂದಿ ಇದ್ದು,ಎಲ್ಲರೂ ಕೆಲಸ ಮಾಡ್ತಿದ್ದಾರೆ. ಹಲವಾರು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದ್ದಾರೆ. ಪ್ರತಿಯೊಬ್ಬ ಯುವಜನರಿಗೂ ಉದ್ಯೋಗ ಸಿಗಲಿ,ಬಡತನ ತೊಲಗಲಿ ಎಂಬುದು ಆಶಯ