ಎರಡು ದಿನದ ಹಿಂದಷ್ಟೇ ಬೃಹತ್ ಸರ್ಚ್ ಇಂಜಿನ್ ಗೂಗಲ್‌ನಲ್ಲಿ ಕನ್ನಡ ಭಾಷೆಗೆ ಅವಮಾನವಾಗುವಂಥ ಸಂಗತಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಅಮೇಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆಯಲ್ಲೂ ಕನ್ನಡಕ್ಕೆ ಅಗೌರವ ತೋರುವ ಕೆಲಸವೊಂದು ನಡೆದಿದೆ.
ಕನ್ನಡ ಬಾವುಟದ ಬಣ್ಣ, ಲಾಂಛನವನ್ನು ಹೊಂದಿರುವ ಮಹಿಳೆಯರ ಒಳ ಉಡುಪುಗಳನ್ನು ಶಾಪಿಂಗ್ ಆಯ್ಕೆಗೆ ಇಡಲಾಗಿದೆ. ಕನ್ನಡ ಬಾವುಟ ಹಾಗೂ ಲಾಂಛನವನ್ನು ಈ ರೀತಿ ಬಳಸಿಕೊಂಡು ನಾಡಿನ ಗೌರವಕ್ಕೆ ಚ್ಯುತಿ ತಂದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದ ಬಾವುಟದ ಬಣ್ಣ, ಭಾರತದ ಅಶೋಕ ಚಕ್ರ ಹಾಗೂ ಕರ್ನಾಟಕದ ಲಾಂಛನ ಬಳಸಿರುವ ಮಹಿಳೆಯರ ಒಳ ಉಡುಪನ್ನು ಅಮೇಜಾನ್ ಸಂಸ್ಥೆ ಆನ್‌ಲೈನ್‌ನಲ್ಲಿ ಶಾಪಿಂಗ್ ಆಯ್ಕೆಯಲ್ಲಿಟ್ಟಿದೆ. ಈ ಮೂಲಕ ಕನ್ನಡಿಗರಿಗೆ ಹಾಗೂ ಭಾರತೀಯರ ಭಾವನೆಗೆ ಧಕ್ಕೆ ತಂದಿದೆ. ಸರ್ಕಾರ ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಮೇಜಾನ್ ಸಂಸ್ಥೆ ಕನ್ನಡಿಗರ ಕ್ಷಮೆ ಕೇಳಬೇಕು. ಈ ರೀತಿ ಅವಮಾನ ಮುಂದುವರೆದರೆ ಹಿಂಸಾ ಮಾದರಿಯಲ್ಲಿ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ತಂತ್ರಜ್ಞಾನ ದೈತ್ಯ ಎಂದು ಕರೆಯಲ್ಪಡುವ ಗೂಗಲ್ನ ಸರ್ಚ್ ಎಂಜಿನ್‌ನಲ್ಲಿ ಇದೇ ರೀತಿ ಆಗಿತ್ತು. ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಗೊಂಡಿತ್ತು. ಗೂಗಲ್ನಂತಹ ದೊಡ್ಡ ಸಂಸ್ಥೆ ಕನ್ನಡ ಭಾಷೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದರು. ಕೊನೆಗೆ ಗೂಗಲ್ ತಪ್ಪನ್ನು ತಿದ್ದಿಕೊಂಡು ಕನ್ನಡ ಭಾಷೆಯಲ್ಲಿಯೇ ಕ್ಷಮೆ ಕೇಳಿತ್ತು. ಇದೀಗ ಮತ್ತೆ ಅಂಥ ಸಂಗತಿ ಮರುಕಳಿಸಿದೆ.






