ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗಿಗಳಲ್ಲಿ ಸದ್ಯ ಬೂಮ್ರಾ ಮೊದಲ ಸ್ಥಾನದಲ್ಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ವೇಳೆ ಜಸ್‌ಪ್ರೀತ್ ಬೂಮ್ರಾ ದಾಖಲೆ ನಿರ್ಮಿಸಿದ್ದಾರೆ. ಐದನೇ ದಿನದಾಟದ ವೇಳೆ ಬೂಮ್ರಾ 2 ವಿಕೆಟ್ ಉರುಳಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆಂಗ್ಲ ಬ್ಯಾಟ್ಸ್‌ಮನ್‌ಗಳಾದ ಆಲಿ ಪೋಪ್ ಮತ್ತು ಜಾನಿ ಬೇರ್ಸ್ಟೋವ್ ವಿಕೆಟ್ ಮುರಿಯುವುದರೊಂದಿಗೆ ಬೂಮ್ರ ದಂತಕತೆ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದಾರೆ.
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಐದನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆಲಿ ಪೋಪ್ ಅವರನ್ನು 2 ರನ್‌ಗೆ ಮತ್ತು ಅನುಭವಿ ಜಾನಿ ಬೇರ್ಸ್ಟೋವ್ ಅವರನ್ನು 0 ರನ್‌ಗೆ ಔಟ್ ಮಾಡಿದರು. ಇದರೊಂದಿಗೆ ಜೂಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗಿಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ, ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಕಪಿಲ್ ದೇವ್ ಹೆಸರಿನಲ್ಲಿ ಈ ದಾಖಲೆಯಿತ್ತು. ಕಪಿಲ್ ದೇವ್ ಅವರು 25 ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಉರುಳಿಸಿದ್ದರು. ಆದರೆ ಬೂಮ್ರಾ 24 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.