ದೇಶದಲ್ಲಿ ಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಕಪ್ಪು ಹಣ ಲಭ್ಯತೆ ಬಗ್ಗೆ ಮಾಹಿತಿಯನ್ನು ನಾವು ಹೆಚ್ಚಿಸಿಕೊಂಡಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ಬ್ಲಾಕ್‍ಮನಿಯನ್ನು ಸಂಪೂರ್ಣ ನಿರ್ಮೂಲ ಮಾಡಲು ಸಹಕಾರಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಖಾಸಗಿ ವಾರ್ತಾವಾಹಿನಿಯ ಭಾರತ್ ವರ್ಷ್ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮೋದಿ, ನಮ್ಮ ದೇಶದ ಹಣವನ್ನು ವಿದೇಶಗಳ ಖಾತೆಗಳಲ್ಲಿ ಠೇವಣಿ ಇಡುವ ಕಾಳಧನಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಿದ್ದೇವೆ ಎಂದರು.
ಈ ಸಂಬಂಧ ದ್ವೀಪರಾಷ್ಟ್ರ ಮಾರಿಷಸ್ ಸೇರಿದಂತೆ ಅನೇಕ ರಾಷ್ಟ್ರಗಳೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಮೋದಿ ಹೇಳಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳು ತಾಂಡವವಾಡುತ್ತಿತ್ತು. ನಮ್ಮ ಸರ್ಕಾರ ಅವುಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ ಎಂದರು.
ಐದು ವರ್ಷಗಳ ಹಿಂದೆ ನಾವು ಅಧಿಕಾರಕ್ಕೆ ಬಂದಾಗ ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ವಿರೋಧ ಪಕ್ಷಗಳು ಪ್ರಶ್ನಿಸಿದವು. ಅನೇಕ ರಾಷ್ಟ್ರಗಳು ಕೂಡ ಚಕಾರವೆತ್ತಿದ್ದವು. ಆದರೆ, ನಾವು ಮಹತ್ವದ ಸಾಧನೆಗಳ ಮೂಲಕ ಈಗ ನಿಯಮ ರೂಪಿಸುವ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.