ಇದೇ ಜೂನ್ 26ರಂದು ಜಿಲ್ಲೆಯ ಮಾನವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಕೈಗೊಳ್ಳಲಿರುವ ಗ್ರಾಮವಾಸ್ತವ್ಯ, ಸಾರ್ವಜನಿಕ ಕುಂದು ಕೊರತೆಗಳ ಆಲಿಕೆ ಹಾಗೂ ಸರ್ಕಾರದ ವತಿಯಿಂದ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ವತಿಯಿಂದ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ಜೂನ್ 26 ರಂದು ಬೆಳಿಗ್ಗೆ ರಾಯಚೂರಿಗೆ ಆಗಮಿಸಿ ಸಾರಿಗೆ ಬಸ್ ಮೂಲಕ ಕರೇಗುಡ್ಡ ಗ್ರಾಮಕ್ಕೆ ತೆರಳಲಿದ್ದು, ಕರೇಗುಡ್ಡ ಗ್ರಾಮದಲ್ಲಿ ಸಮಾರಂಭದ ಬೃಹತ್ ವೇದಿಕೆ ನಿರ್ಮಿಸಲಾಗಿದೆ ಎಂದರು.
ಜನತಾ ದರ್ಶನಕ್ಕೆ ಅರ್ಜಿ ಸಲ್ಲಿಸಲು ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚಾಗಿ ಆಗಮಿಸಲಿದ್ದು ಅವರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತದ ವತಿಯಿಂದ 14 ಕೌಂಟರ್‍ಗಳನ್ನು ತೆರೆಯಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಟೋಕನ್ ನೀಡಲಾಗುತ್ತಿದೆ.
ಟೋಕನ್ ಸಂಖ್ಯೆಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಇದಕ್ಕಾಗಿ 3 ಫಾರ್ಮೇಟ್‍ಗಳನ್ನು ರೂಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಮಹಿಳೆ, ವೃದ್ಧರು ಹಾಗೂ ವಿಕಲಚೇನರಿಗಾಗಿ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ ಎಂದವರು ಹೇಳಿದರು.