ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ
ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಕರ್ನಾಟಕದ ಹವಾಮಾನದಲ್ಲಿ ಸ್ಪಷ್ಟ ಬದಲಾವಣೆ ಕಂಡುಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದ್ದು, ಕೆಲವು ಭಾಗಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಕಂಡುಬಂದಿದೆ. ಬೆಂಗಳೂರು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಮತ್ತು ಬೆಳಿಗ್ಗೆ ತಂಪಾದ ಗಾಳಿ ಬೀಸುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೀತ ಅಲೆ ತೀವ್ರಗೊಂಡಿದೆ. ಬೀದರ್ (6.4°C), ಬೆಳಗಾವಿ (8.7°C), ಬಾಗಲಕೋಟೆ (9.9°C), ರಾಯಚೂರು (10.4°C), ಧಾರವಾಡ ಮತ್ತು ಗದಗ (ತಲಾ 10.7°C) ಜಿಲ್ಲೆಗಳು ತೀವ್ರ ಚಳಿಯನ್ನು ಅನುಭವಿಸುತ್ತಿವೆ.
ದಕ್ಷಿಣ ಒಳನಾಡಿನ ಚಿಕ್ಕಮಗಳೂರು (11.1°C), ಹಾಸನ (13.1°C), ತುಮಕೂರು (13.1°C), ಕೋಲಾರ (13.3°C) ಮತ್ತು ಚಿತ್ರದುರ್ಗ (13°C) ಜಿಲ್ಲೆಗಳಲ್ಲೂ ಚಳಿಗಾಲದ ವಾತಾವರಣ ಮುಂದುವರಿದಿದೆ.
ಇನ್ನು ಕರಾವಳಿ ಕರ್ನಾಟಕದಲ್ಲಿ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ ಕಂಡುಬರುತ್ತಿದ್ದು, ಮಂಗಳೂರು ಭಾಗದಲ್ಲಿ ಗರಿಷ್ಠ ತಾಪಮಾನ 28°C–30°C ಮತ್ತು ಕನಿಷ್ಠ ತಾಪಮಾನ 20°C–21°C ಇರಲಿದೆ. ಐಎಂಡಿ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ತಕ್ಷಣಕ್ಕೆ ಮಳೆಯಾಗುವ ಸಾಧ್ಯತೆ ಇಲ್ಲ. ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಹಾಗೂ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.






