ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್

0
118

ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ʼಗೆ ಮತ್ತೆ ಸಿಬಿಐ ಸಮನ್ಸ್

ನವದೆಹಲಿ: ಕರೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ರಾಜಕಾರಣಿ ವಿಜಯ್ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ.
ಪ್ರಕರಣ ಸಂಬಂಧ ಮಾರ್ಚ್ 10ರಂದು ನಡೆಯುವ ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರಿಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದಾರೆ. ವಿಜಯ್ ಅವರಿಂದ ಹೆಚ್ಚಿನ ಸ್ಪಷ್ಟೀಕರಣ ಅಗತ್ಯವಿರುವ ಕೆಲವು ಹೆಚ್ಚುವರಿ ಪುರಾವೆಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ವಹಿಸಿಕೊಂಡಿತ್ತು. ನಂತರ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ತನಿಖೆ ವರ್ಗಾಯಿಸಲಾಗಿದೆ.
ಕಳೆದ ಜನವರಿ 12 ಮತ್ತು ಜನವರಿ 19ರಂದು ಸಿಬಿಐ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಜಯ್ ಅವರು ವಿಚಾರಣೆಗೆ ಹಾಜರಾಗಿದ್ದರು. ಈ ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ವಿಜಯ್ ಅವರು ಪಕ್ಷದ ಸಮಾವೇಶ ಆಯೋಜಿಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಜೊತೆಗೆ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.