ಕರ್ನಾಟಕದಲ್ಲಿ ಬಿಸಿಲು ಆರಂಭ: ಬೀದರ್, ಕಲಬುರಗಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ಮುಂಗಾರು ಹಾಗೂ ಚಂಡಮಾರುತ ಕಾಲ ಮುಗಿದ ಹಿನ್ನೆಲೆ, ರಾಜ್ಯದಾದ್ಯಂತ ಬಿಸಿಲಿನ ತಾಪಮಾನ ಮತ್ತೆ ಏರಿಕೆಯಾಗುತ್ತಿದೆ. ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದು, ಕೆಲವೆಡೆ ಮಾತ್ರ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದರಿಂದ ಹೊರತುಪಡಿಸಿ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ.
ಭಾಲ್ಕಿ ಮತ್ತು ಔರಾದ್ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದೆ. ಹುಮ್ನಾಬಾದ್, ಬೀದರ್, ಚಿಂಚೋಳಿ, ಕಮಲಾಪುರ, ತರೀಕೆರೆ, ಮೂಡುಬಿದಿರೆ, ಪೊನ್ನಂಪೇಟೆ, ಗೇರುಸೊಪ್ಪ, ಗುರುಮಿಟ್ಕಲ್, ಮಂಗಳೂರು, ಸೈದಾಪುರ, ಸೇಡಂ, ಉಪ್ಪಿನಂಗಡಿ ಮತ್ತು ವಿರಾಜಪೇಟೆಗಳಲ್ಲಿ ಸಹ ಮಳೆಯ ದಾಖಲೆ ಬಂದಿದೆ.
ಹವಾಮಾನ ಮಾಹಿತಿ ಪ್ರಕಾರ, ಹೊನ್ನಾವರದಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಳಗಾವಿ ಏರ್‌ಪೋರ್ಟ್‌ನಲ್ಲಿ 17.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಶುಭ್ರ ಆಕಾಶವಿದ್ದು, ಬಿಸಿಲು-ತಂಪಿನ ಮಿಶ್ರ ವಾತಾವರಣವಿದೆ.






