ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ ಸರಕಾರದ ಕಾಲದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಆಗಬಾರದು ಎಂಬ ಅಸೂಯೆ, ಕುತಂತ್ರ ಬಿಜೆಪಿಯದು. ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಶಾಶ್ವತ ಪರಿಹಾರ ನೀಡುತ್ತಿದ್ದಾರೆ. ಬಿಜೆಪಿಯಿಂದ ಸಾಧ್ಯವಾಗದ್ದನ್ನು ನಾವು ತೀರ್ಮಾನ ಮಾಡಿದ್ದೇವೆ ಎಂಬ ಅಸೂಯೆ ಅವರದು” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ಹರಿಹಾಯ್ದಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಟನಲ್ ರಸ್ತೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರೇ ಹಾಗೆ. ಅವರಿಗೆ ಬೆಂಗಳೂರು ಅಭಿವೃದ್ಧಿ ಆಗಬಾರದು. ತೇಜಸ್ವಿ ಸೂರ್ಯ ಅವರಿಗೆ ಪರ್ಯಾಯ ಪರಿಹಾರ ಏನು ಎಂದು ಕೇಳಿದರೆ, ಬೆಂಗಳೂರಿನ ನಾಗರೀಕರು ಕಾರುಗಳನ್ನು ಬಿಟ್ಟು ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಬಳಸುವಂತೆ ಶಿವಕುಮಾರ್ ಅವರು ಕರೆ ನೀಡಬೇಕು ಎಂದು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ,
ರಾಜ್ಯ ನಾಯಕರು, ಸಂಸದರು, ಕೇಂದ್ರ ಸಚಿವರು, ಶಾಸಕರು ಎಲ್ಲರೂ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ನೀವು ಕಾರು ಖರೀದಿ ಮಾಡಬೇಡಿ, ಸಂಚಾರ ದಟ್ಟಣೆ ನಿಯಂತ್ರಿಸಿ ಎಂದು ಕರೆ ನೀಡಲಿ. ಅವರು ಕೂಡ ಕಾರು ಬಳಸದಂತೆ ಪ್ರಧಾನಿ ಅವರ ಬಳಿ ದೀಕ್ಷೆ ಪಡೆದು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ, ಮಾದರಿಯಾದರೆ ನಾವು ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮತದಾರರಿಗೆ ಅದನ್ನು ಹೇಳಬಹುದು. ಆಗ ಸಂಚಾರ ದಟ್ಟಣೆ ನಿವಾರಿಸಬಹುದು” ಎಂದು ತಿವಿದರು.
ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳಿಗೆ ಅವಕಾಶ ಕೊಡುವ ಬಗ್ಗೆ ಕೇಳಿದಾಗ, “ಅವರು ಏನೇನೋ ಹೇಳುತ್ತಿರುತ್ತಾರೆ. ಅವರ ಪ್ರಕಾರ ಮೋದಿ ಅವರು ಟನಲ್ ರಸ್ತೆ ಮಾಡಿದರೆ ಚಮತ್ಕಾರ, ಕಾಂಗ್ರೆಸ್ ಸರ್ಕಾರ ಮಾಡಿದರೆ ಬಲತ್ಕಾರ. ಬಾಂಬೆಯಲ್ಲಿ ಟನಲ್ ರಸ್ತೆ ಮಾಡಲಾಗಿದೆ. ನಮ್ಮಲ್ಲಿ ಮೆಟ್ರೋ ಯೋಜನೆಗೂ ಟನಲ್ ರೂಪಿಸಿದ್ದೇವೆ. ಬೆಂಗಳೂರಿನಲ್ಲಿ ಎಲ್ಲೂ ನೇರವಾದ ರಸ್ತೆ ಇಲ್ಲ. ಮಹದೇವಪುರದಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾಗಿ 7 ವರ್ಷವಾಗಿದೆ. ಬಿಜೆಪಿ ಕಾಲದಲ್ಲಿ ಕೈಗೆತ್ತಿಕೊಂಡ ಯೋಜನೆ ಅಗಲೀಕರಣ ಸಾಧ್ಯವಾಗಿಲ್ಲ. ಈ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ.
ಎಲ್ಲರಿಗೂ ಪರಿಹಾರ ನೀಡಿ ರಸ್ತೆ ಅಗಲಿಕರಣ ಮಾಡಲು ಸಾವಿರಾರು ಕೋಟಿ ಹಣ ಬೇಕಾಗುತ್ತದೆ. ಈ ಎಲ್ಲಾ ಸಾಧಕ ಬಾಧಕ ಚರ್ಚಿಸಿ ಮುಂದುವರಿಯಬೇಕು. ಯಾವುದೇ ಯೋಜನೆ ಒಂದೇ ದಿನದಲ್ಲಿ ಮ್ಯಾಜಿಕ್ ಮೂಲಕ ಆಗುವುದಿಲ್ಲ. ಕನಿಷ್ಠ 3-8 ವರ್ಷ ಬೇಕಾಗುತ್ತದೆ. ಸಿಎಂ, ಡಿಸಿಎಂ, ಸಚಿವರುಗಳು ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲು ಗುರಿ ಹೊಂದಿದ್ದಾರೆ. ಇದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.
ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ 10% ಅನುದಾನ ನೀಡುತ್ತದೆ. ತೇಜಸ್ವಿ ಸೂರ್ಯ ತಾನೇ ಈ ಯೋಜನೆ ತಂದಿರುವಂತೆ ವರ್ತಿಸುತ್ತಾರೆ. ಕರ್ನಾಟಕ ಮೆಟ್ರೋಗೆ 10% ಅನುದಾನ ನೀಡುವ ಕೇಂದ್ರ ಸರ್ಕಾರ ಅಹಮದಾಬಾದ್ ಮೆಟ್ರೋಗೆ 20% ಅನುದಾನ ನೀಡುತ್ತಿದೆ. ಇದರ ಬಗ್ಗೆ ನೀವು ಪ್ರಸ್ತಾಪ ಮಾಡುವುದಿಲ್ಲ ಯಾಕೆ ಎಂದು ಅವರನ್ನು ಕೇಳಿದೆ. ನಮ್ಮ ರಾಜ್ಯಕ್ಕೂ 20% ಅನುದಾನ ನೀಡಬಹುದಲ್ಲವೇ? ಇವರ ಧ್ವನಿ ಕೇಂದ್ರ ಸರ್ಕಾರ ಬಳಿ ಇರುವುದಿಲ್ಲ, ಕೇವಲ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮುಂದೆ ಇರುತ್ತದೆ. ಅವರು ರಾಜಕೀಯಕ್ಕೆ ಧ್ವನಿ ಎತ್ತುತ್ತಿದ್ದಾರೆ ಹೊರತು ಜನರ ಹಿತಕ್ಕಾಗಿ ಧ್ವನಿ ಎತ್ತುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2036ರ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಬಿಡ್ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಇದಕ್ಕೆ ಯಾವ ರಾಜ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ? ಗುಜರಾತಿನ 50 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಮಾಡಲು ಮುಂದಾಗಿದ್ದಾರೆ. ಗುಜರಾತ್ ಕೇಂದ್ರಿಕೃತವಾಗಿಸಿಕೊಂಡು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಧ್ವನಿ ಎತ್ತಿದ್ದು. ಈ ವಿಚಾರವಾಗಿ ಸಂಸದರು ಮಾತನಾಡಬೇಕಲ್ಲವೇ?
ಒಲಂಪಿಕ್ಸ್ ಆತಿಥ್ಯ ನಮಗೆ ಸಿಗುತ್ತದೆಯೋ ಇಲ್ಲವೋ, ಅದಕ್ಕೆ ಅಗತ್ಯ ಸಿದ್ಧತೆ ಮಾಡುವಾಗ ದಕ್ಷಿಣ ಭಾರತಕ್ಕೂ ಆದ್ಯತೆ ನೀಡಬೇಕಲ್ಲವೇ? ದಕ್ಷಿಣ ಭಾರತದಲ್ಲಿ ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಚ್ಚಿ ಸೇರಿದಂತೆ ಅನೇಕ ನಗರಗಳಿವೆ. ಸಮಾನತೆ ಇರಬೇಕು ಎಂಬುದಾದರೆ ಈ ನಗರಗಳಿಗೆ ಆದ್ಯತೆ ನೀಡಬಹುದಿತ್ತಲ್ಲವೇ? ಈ ಬಗ್ಗೆ ತೇಜಸ್ವಿ ಸೂರ್ಯ ಮಾತನಾಡಲಿ. ವಿದ್ಯೆ ಕಲಿತಿದ್ದೇನೆ, ಮಾತನಾಡುತ್ತೇನೆ ಎಂದು ಟ್ವೀಟ್ ಮಾಡಿಕೊಂಡು, ಮಾಧ್ಯಮಗಳನ್ನು ಹೈಜಾಕ್ ಮಾಡಿಕೊಂಡು ಕನ್ನಡಿಗರಿಗೆ ಆಗುವ ಅನ್ಯಾಯ ಮರೆಮಾಚುತ್ತಿದ್ದಾರೆ” ಎಂದು ಕಿಡಿಕಾರಿದರು.






