ಕೊರೊನಾ ಸಾಂಕ್ರಾಮಿಕದ ನಡುವೆ ದೇಶದಲ್ಲಿ ಮತ್ತೊಮ್ಮೆ ಚುನಾವಣಾ ಪರ್ವ ಆರಂಭವಾಗುತ್ತಿದ್ದು, ಹಲವು ಮುಖಂಡರು, ನಾಯಕರು, ಸಂಘಟನಾ ಚತುರರು, ರಾಜತಂತ್ರಜ್ಞರಿಗೆ ಭರಪೂರ ಕೆಲಸ ಸಿಗುತ್ತಿದೆ. ಈ ನಡುವೆ ಪಕ್ಷಗಳ ನಡುವಿನ ಮೈತ್ರಿ, ಪಕ್ಷಾಂತರ ಮಾಮೂಲಿ ಎನ್ನಬಹುದು. ಇತ್ತೀಚಿಗೆ ರಾಜಕೀಯ ವಲಯದಲ್ಲಿ ಅದರಲ್ಲೂ ಕಾಂಗ್ರೆಸ್ ಭವನದ ಪಡಸಾಲೆಯಲ್ಲಿ ಗಟ್ಟಿಯಾಗಿ ಕೇಳಿ ಬಂದ ಗುಸುಗುಸು ಸುದ್ದಿಯೆಂದರೆ ಕನ್ಹಯ್ಯ ಕುಮಾರ್ ಬಗ್ಗೆ ಎನ್ನಬಹುದು. ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಮುಖ್ಯಸ್ಥ, ಸಿಪಿಐ ಮುಖಂಡ ಕನ್ಹಯ್ಯ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕನ್ಹಯ್ಯ ಆಪ್ತರು ಇದೆಲ್ಲ ಗಾಳಿಸುದ್ದಿ, ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ, ಕಳೆದ ಲೋಕಸಭೆ ಚುನಾವಣೆ ಬಳಿಕ ಅನೇಕ ಬಾರಿ ರಾಹುಲ್ ಗಾಂಧಿ ಜೊತೆ ಕನ್ಹಯ್ಯ ಮಾತುಕತೆ ನಡೆಸಿದ್ದು, ಬಿಹಾರದಲ್ಲಿ ತನ್ನದೇ ಆದ ತಂಡ ಕಟ್ಟಲು ನೆರವು ಕೋರಿದ್ದರು ಎನ್ನಲಾಗಿದೆ. ಬಿಹಾರದಲ್ಲಿ ಕಾಂಗ್ರೆಸ್ ಬಲಗೊಳಿಸಿದ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಕನ್ಹಯ್ಯ ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.
ಆದರೆ, ರಾಷ್ಟ್ರೀಯ ಜನತಾ ದಳ( ಆರ್ ಜೆ ಡಿ ) ಮುಖಂಡ ತೇಜಸ್ವಿ ಯಾದವ್ ಜೊತೆಗೂ ಕಾಂಗ್ರೆಸ್ ಮಾತುಕತೆ ನಡೆಸಿದ್ದು, ಆರ್ ಜೆಡಿ ಹಳೆ ದೋಸ್ತಿಕಳೆದುಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲ. ಆದರೆ, ಮೊದಲು ಕಾಂಗ್ರೆಸ್ ಎಲ್ಲೆಡೆ ಬಲಗೊಳಿಸಿ ನಂತರ ಮಿತ್ರಪಕ್ಷಗಳತ್ತ ನೋಡಲು ರಾಹುಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.