ಅದೊಂದು ದಿನ 16ರ ಹರೆಯದ ಹುಡುಗನೊಬ್ಬ ನಡೆದುಕೊಂಡು ಹೋಗುತ್ತಿದ್ದ. ಹಾವುಗಳ ಹಿಂಡೊಂದು ನದಿಯ ತೀರದಲ್ಲಿ ಬಿದ್ದಿದ್ದನ್ನ ನೋಡಿದ. ಬಿಸಿಲಿನ ತಾಪ ತಡೆಯಲಾಗದೇ ಹಾವುಗಳು ಸತ್ತುಬಿದ್ದಿದ್ದನ್ನು ಕಂಡ. ಅಲ್ಲೇ ಕಣ್ಣೀರು ಹಾಕುತ್ತಾ ಕುಳಿತ. ಆಮೇಲೆ ಅಳುವುದನ್ನ ನಿಲ್ಲಿಸಿ ಮನಸ್ಸಿನಲ್ಲೊಂದು ದೃಢ ನಿಶ್ಚಯ ಮಾಡಿದ. 30 ವರ್ಷಗಳಲ್ಲಿ ತಾನು ಎಣಿಸಿದ್ದನ್ನ ಮಾಡಿ ಮುಗಿಸಿದ. ಪರಿಣಾಮ ಭಾರತದ ಫಾರೆಸ್ಟ್ ಮ್ಯಾನ್ ಎಂಬ ಬಿರುದನ್ನ ಪಡೆದರು.
ಇಲ್ಲಿ ಹೇಳ ಹೊರಟಿರುವ ಸ್ಟೋರಿ ಜಾಧವ್ ಮೊಲಾಯಿ ಪಾಯೆಂಗ್ ಅವರದ್ದು.!
ಇವರು ಭಾರತದ ಫಾರೆಸ್ಟ್ ಮ್ಯಾನ್ ಎಂದೇ ಖ್ಯಾತಿ. ಇವರ ಪರಿಸರ ಕಾಳಜಿ ಅಷ್ಟಿಷ್ಟಲ್ಲ; ಇವರಿಗೆ ನಾಡಿಗಿಂತ ಕಾಡೇ ಬಲು ಇಷ್ಟು. ಅದರಲ್ಲೂ ಪ್ರಾಣಿ ಪಕ್ಷಿಗಳ ಸಂಕುಲ ಅಂದರೆ ಪಂಚಪ್ರಾಣ. ಅವುಗಳ ರಕ್ಷಣೆ ಎಂದರೆ ಎಲ್ಲಿಲ್ಲದ ಕಾಳಜಿ.
ಜಾಧವ್ಗೆ ಬಾಲ್ಯದಿಂದಲೂ ಕಾಡು, ಪ್ರಾಣಿ, ಪಕ್ಷಿಗಳೆಂದರೆ ಜೀವ. ಒಮ್ಮೆ ಊರ ಸಮೀಪದ ಬರಡು ಭೂಮಿಯಲ್ಲಿ ನಡೆದು ಹೋಗುತ್ತಿದ್ದರಂತೆ. ಆಗ ಅಲ್ಲಿ ಹಾವುಗಳ ಸಾವನ್ನ ಕಣ್ಣಾರೆ ಕಂಡು, ಕಣ್ಣೀರು ಹಾಕಲಾರಂಭಿಸಿದ್ರು. ಇದಕ್ಕೆ ಕಾರಣ ಏನೆಂದು ಹುಡುಕಿದ್ರು. ಆಗ ಅರಣ್ಯ ನಾಶ ಎಂಬುದು ಗೊತ್ತಾಗಿತ್ತು. ಇನ್ನು ಅತ್ತರೆ ಲಾಭವಿಲ್ಲ. ಈ ಮಾರಣಹೋಮವನ್ನು ಹೇಗಾದರೂ ತಡೆಯಬೇಕು ಅಂತಾ ನಿಶ್ಚಯಿಸಿದರು.
ಬಾಲಕ ಜಾಧವ್, ಹಾವುಗಳ ಸಾವುನ್ನು ಕಂಡು ಮನೆಗೆ ವಾಪಸ್ ಓಡಿ ಬಂದ್ರು. ಬರಡು ಭೂಮಿಯಲ್ಲಿ ಬಿದಿರು ಚೆನ್ನಾಗಿ ಬೆಳೆಯುತ್ತೆ ಎಂದು ಅರಿತಿದ್ದ ಆ ಹುಡುಗ, 200 ಬಿದಿರು ಸಸಿಗಳನ್ನ ಹೊತ್ತು ಆ ಬರಡು ನೆಲದಲ್ಲಿ ನೆಟ್ರು. ಅಂದು ಬಿದಿರು ನೆಟ್ಟ ಅರಣ್ಯ ಇಂದು ‘ಮೊಲಾಯಿ ಅರಣ್ಯ’ ಎಂದೇ ಹೆಸರಾಗಿದೆ.
ಜಾಧವ್ ಹುಟ್ಟಿದ್ದು ಅಸ್ಸಾಂನ ಜೊರ್ಹಾತ್ ಜಿಲ್ಲೆಯ ಅರುಣಾ ಸಪೋರಿ ಎಂಬ ಕುಗ್ರಾಮದಲ್ಲಿ. ಕೃಷಿಯೇ ಜೀವನಾಧಾರವಾಗಿರುವ ಮಿಶಿಂಗ್ ಎಂಬ ಬುಡಕಟ್ಟು ಸಮುದಾಯದ ಪುಟ್ಟ ಕುಟುಂಬದಲ್ಲಿ. ಕೃಷಿಕರಾಗಿ ಹುಟ್ಟಿದ ಜಾಧವ್ ಮೇಲೆ ಹಾವಿನ ಸಾವಿನ ಘಟನೆ ಅದೆಷ್ಟರಮಟ್ಟಿಗೆ ಪ್ರಭಾವ ಬೀರಿತ್ತು.
ಅಂದ್ರೆ, ತಮ್ಮ ಗ್ರಾಮದ ಸುಮಾರು 80ರಷ್ಟು ಮಂದಿ ಯುವಕರಂತೆ ಮಿಲಿಟರಿ ಸೇರಲಿಲ್ಲ. ತಾನು ಹೋರಾಡಬೇಕಿದ್ದು ಅರಣ್ಯ ನಾಶದ ವಿರುದ್ಧ ಅಂತಾ ನಿರ್ಧರಿಸಿ ಕಾಡು ಬೆಳೆಸುವುದನ್ನೇ ಕಾಯಕ ಮಾಡಿಕೊಂಡರು. 30 ವರ್ಷಗಳ ಕಾಲ ಗಿಡಗಳನ್ನ ಪೋಷಿಸುವುದನ್ನೇ ಕೆಲಸ ಮಾಡಿಕೊಂಡ. ಇವರ ಕೃಷಿಗೆ ಫಲವೇ ಒಂದು ಸಾವಿರದ 360 ಎಕರೆ ವ್ಯಾಪ್ತಿಯ ಈ ದಟ್ಟ ಮೊಲಾಯಿ ಅರಣ್ಯ.
ಒಮ್ಮೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಘೇಂಡಾಮೃಗಗಳ ಸಂತತಿಯ ಬಗ್ಗೆ ಅಧ್ಯಯನ ಮಾಡಲು ಬಂದಾಗ ಈ ದಟ್ಟ ಕಾಡನ್ನ ನೋಡಿ ಒಂದು ಕ್ಷಣ ಮೌನವಾದ್ರು. ಇಂತಹ ವಿಶಾಲವಾದ ಅರಣ್ಯವನ್ನ ವ್ಯಕ್ತಿಯೊಬ್ಬರು ಪೋಷಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಈ ಅರಣ್ಯಕ್ಕೆ ಅವರದೇ ಹೆಸರನ್ನ ನಾಮಕರಣ ಮಾಡಿದ್ರು.
ಅಷ್ಟೇ ಅಲ್ಲ, ಜಾಧವ್ರ ಅರಣ್ಯದ ಬಗೆಗಿನ ಕಾಳಜಿಗೆ 2012ರಲ್ಲಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಬಿರುದು ದೊರೆತಿದೆ. ಆ ಬಳಿಕ, ಜಾಧವ್ ರನ್ನ ಹಲವು ಪ್ರಶಸ್ತಿಗಳು ಅರಸಿ ಬಂದವು. ಜಾಧವ್ ರ ಈ ಮಹತ್ಕಾರ್ಯವನ್ನ ಪರಿಗಣಿಸಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ 2015ರಲ್ಲಿ ಪದ್ಮಶ್ರೀ ಗೌರವ ನೀಡಿದೆ.
ಹಾಲು ಮಾರುತ್ತಾ ತಮ್ಮ ಹೆಂಡತಿ ಬಿನಿತಾ ಮತ್ತು ಮೂವರು ಮಕ್ಕಳನ್ನ ಪೋಷಿಸುತ್ತಿರುವ ಜಾಧವ್, ಈಗಲೂ ಎಲ್ಲೇ ಖಾಲಿ ಜಾಗ ಕಂಡರೂ ಅಲ್ಲಿ ಗಿಡ ನೆಡುತ್ತಾರೆ. ಅದನ್ನ ಪೋಷಿಸುತ್ತಾರೆ. ಸಣ್ಣ ಹುಡುಗನಾಗಿ ಅಂದು ನೆಟ್ಟ ಗಿಡಗಳು ಈಗ ಆಕಾಶದೆತ್ತರಕ್ಕೆ ಬೆಳೆದು ನಿಂತಿವೆ.
ಈ ವಿಶಾಲವಾದ ದಟ್ಟ ಅರಣ್ಯದಲ್ಲೀಗ ಐದು ಬಂಗಾಳದ ಹುಲಿಗಳು, ಘೇಂಡಾಮೃಗಗಳು, ಹಾವುಗಳು, ರಣಹದ್ದುಗಳು ಸೇರಿದಂತೆ ಹಲವು ರೀತಿಯ ಪ್ರಾಣಿ ಪಕ್ಷಿಗಳು ನೆಲೆ ಕಂಡುಕೊಂಡಿವೆ. ಕೇವಲ ಕಾಡನ್ನ ಬೆಳೆಸಿದ್ದು ಮಾತ್ರವಲ್ಲ, ಅವುಗಳನ್ನ ಮರಗಳ್ಳರು ಮತ್ತು ಬೇಟೆಗಾರರಿಂದ ಏಕಾಂಗಿಯಾಗಿ ರಕ್ಷಣೆ ಮಾಡ್ತಿದ್ದಾರೆ ಜಾಧವ್. ಇವರ ಈ ಕೆಲಸದಿಂದಾಗಿ ಪ್ರವಾಸೋದ್ಯಮ ಕೂಡ ಹೆಚ್ಚಿದೆ.
ಒಟ್ಟಿನಲ್ಲಿ, ಒಬ್ಬಂಟಿಯಾಗಿ ಏನು ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸುವವರಿಗೆ ಜಾಧವ್ ಮೊಲಾಯಿ ಪಾಯೆಂಗ್ ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ. ಇವರಂಥ ಛಲಗಾರರು ಊರಿಗೆ ಒಬ್ಬರಿದ್ರೆ ಇಡೀ ದೇಶ ಹಸಿರು ಸಿರಿಯಿಂದ ಕಂಗೊಳಿಸೋದ್ರಲ್ಲಿ ಅನುಮಾನವೇ ಇಲ್ಲ.