ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಬೆಂಗಳೂರು: ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಹಾಗೂ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಾಲ ವಸೂಲಾತಿ ವೇಳೆ ಆರ್ಬಿಐ ನಿಯಮದಂತೆ ನಡೆದುಕೊಳ್ಳಬೇಕು.
ಸಂಜೆ 5 ಗಂಟೆ ನಂತರ ಸಾಲ ವಸೂಲಾತಿಗೆ ಹೋಗಬಾರದು. ಮೈಕ್ರೋ ಫೈನಾನ್ಸ್, ಗಿರವಿ ಅಂಗಡಿಯವರು ಕಾನೂನು ಪಾಲಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅನಧಿಕೃತ ವ್ಯವಹಾರ ನಡೆಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾಲಗಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕಾನೂನು ತರುತ್ತೇವೆ. ಕಾನೂನು ಇಲಾಖೆ, ಗೃಹ ಇಲಾಖೆ, ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು.
ನೆರೆ ರಾಜ್ಯಗಳಲ್ಲಿರುವ ಕಾನೂನು ಪರಿಶೀಲಿಸಿ ಹೊಸ ಕಾನೂನು ಜಾರಿಗೆ ತರುತ್ತೇವೆ. ಸುಗ್ರೀವಾಜ್ಞೆ ಮೂಲಕ ಕೂಡಲೇ ಹೊಸ ಕಾನೂನನ್ನು ತರುತ್ತೇವೆ. ಒಂದು ವೇಳೆ ಸಾಲಗಾರರಿಗೆ ಕಿರುಕುಳ ನೀಡಿದರೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.