ಅಫ್ಘಾನಿಸ್ತಾನದ ಕಾಬೂಲ್‌ನಿಂದ 85 ಭಾರತೀಯರನ್ನು ಹೊತ್ತು ಐಎಎಫ್ ವಿಮಾನ ಪ್ರಯಾಣ ಬೆಳೆಸಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಅಲ್ಲಿರುವ ಭಾರತೀಯರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದ್ದು, 85 ಭಾರತೀಯರನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-130 ಜೆ ವಿಮಾನ ಶನಿವಾರ ಬೆಳಗ್ಗೆ ಕಾಬೂಲ್‌ನಿಂದ ಪ್ರಯಾಣ ಆರಂಭಿಸಿದೆ.
ಸರ್ಕಾರ ಸಂಘಟಿತ ಪ್ರಯತ್ನದೊಂದಿಗೆ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ ಕರೆತರುತ್ತಿದೆ. ಕಳೆದ ಸೋಮವಾರ ಕಾಬೂಲ್ ತಾಲಿಬಾನ್ ಉಗ್ರರ ವಶವಾದ ನಂತರ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಅಮೆರಿಕ ಭದ್ರತಾ ಪಡೆಗಳಿಂದ ಕ್ಲಿಯರೆನ್ಸ್ ಪಡೆದು ಕೆಲ ಪತ್ರಕರ್ತರು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 180 ಅಧಿಕಾರಿಗಳನ್ನು ಭಾರತಕ್ಕೆ ಕರೆತಂದಿದ್ದವು.
ಕಾಬೂಲ್‌ನಿಂದ ಟೇಕಾಫ್ ಆದ ವಿಮಾನ ಇಂಧನ ತುಂಬಿಸಿಕೊಳ್ಳುವ ಸಲುವಾಗಿ ತಜಕಿಸ್ತಾನದಲ್ಲಿ ಇಳಿದಿದೆ. ಕಾಬೂಲ್ ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತೀಯ ಅಧಿಕಾರಿಗಳು ನೆರವಾಗುತ್ತಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ.