ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಕಣ್ತುಂಬಿಕೊಳ್ಳಲು ಸೇರಿರುವ ಸಹಸ್ರಾರು ಭಕ್ತಗಣ
ಮಡಿಕೇರಿ: ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಲಕಾವೇರಿ ಕ್ಷೇತ್ರದಲ್ಲಿ ಭಕ್ತರ ದಂಡು ಹೆಚ್ಚುತ್ತಿದೆ. ವರ್ಷದಲ್ಲಿ ಒಂದೇ ಬಾರಿಗೆ ನಡೆಯುವ ಈ ಪವಿತ್ರ ತೀರ್ಥೋದ್ಭವದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ತಲಕಾವೇರಿಗೆ ಆಗಮಿಸುತ್ತಿದ್ದಾರೆ.
ತಲಕಾವೇರಿ, ಕೊಡಗು ಜಿಲ್ಲೆಯ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಪ್ರತಿವರ್ಷ ನಿಗದಿತ ಸಮಯದಲ್ಲಿ ಕಾವೇರಿ ನದಿಯ ಮೂಲಸ್ರೋತದಿಂದ ನೀರು ಉಕ್ಕಿ ಹರಿಯುತ್ತದೆ. ಇದನ್ನು ತೀರ್ಥೋದ್ಭವ ಎಂದು ಕರೆಯಲಾಗುತ್ತದೆ. ಈ ಸಂದರ್ಭ ಭಕ್ತರು ತೀರ್ಥವನ್ನು ಪಡೆದು ಪುಣ್ಯಸ್ನಾನ ಮಾಡುವುದು ಸಂಪ್ರದಾಯ.
ಮಧ್ಯಾಹ್ನ 1:44 ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋಧ್ಭವ ಜರುಗಲಿದ್ದು, ಮುಂಜಾನೆಯಿಂದಲೇ ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಅರ್ಚಕರ ತಂಡ ಕೂಡ ಕಾವೇರಿಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಮುಂಜಾನೆಯಿಂದಲೆ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ.
ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಲಗ್ಗೆಯಿಡುತ್ತಿದ್ದು ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ತೀರ್ಥಸ್ವರೂಪಿಣಿಯಾದ ಕಾವೇರಿ ಮಾತೆಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದು ಒಂದು ತಿಂಗಳ ಜಾತ್ರೆಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿಕೊಂಡಿದೆ.