ತಾಲಿಬಾನ್ ಭಾರತದ ವಿರುದ್ದ ದಾಳಿ ನಡೆಸಲು ಉಗ್ರ ಸಂಘಟನೆಗಳಿಗೆ ಸಹಕಾರ ನೀಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, “ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ,” ಎಂದು ತಾಲಿಬಾನ್ ಹೇಳಿಕೊಂಡಿದೆ.

“ನಮಗೆ ವಿಶ್ವದ ಯಾವ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕು ಇದೆ. ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ,” ಎಂದು ತಾಲಿಬಾನ್ ಹೇಳಿದೆ. ಆದರೆ ಈ ಸಂದರ್ಭದಲ್ಲೇ “ಯಾವುದೇ ರಾಷ್ಟ್ರದ ವಿರುದ್ದ ಈ ವಿಚಾರದಲ್ಲಿ ಶಸ್ತ್ರ ಪ್ರಯೋಗ ಮಾಡುವ ನೀತಿ ನಮ್ಮಲ್ಲಿ ಇಲ್ಲ,” ಎಂದು ಸ್ಪಷ್ಟನೆ ನೀಡಿದೆ.

ಬಿಬಿಸಿ ಉರ್ದು ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್, “ನಾನು ಮುಸ್ಲಿಮರಾಗಿರುವ ಕಾರಣ ಕಾಶ್ಮೀರದ, ಭಾರತದ ಹಾಗೂ ವಿಶ್ವದ ಯಾವುದೇ ದೇಶದ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕಿದೆ,” ಎಂದು ಹೇಳಿದ್ದಾರೆ. “ನಾವು ನಮ್ಮ ಧ್ವನಿಯನ್ನು ಎತ್ತುತ್ತೇವೆ ಹಾಗೂ ಮುಸ್ಲಿಮರು ಎಲ್ಲರೂ ನಿಮ್ಮ ಜನರು ಎಂದು ಹೇಳುತ್ತೇವೆ. ಹಾಗೆಯೇ ಮುಸ್ಲಿಮರು ಕೂಡಾ ನಿಮ್ಮ ನಾಗರಿಕರು ಎಂದು ನಾವು ಹೇಳುತ್ತೇವೆ. ಎಲ್ಲಾ ದೇಶಗಳಲ್ಲಿಯೂ ಮುಸ್ಲಿಮರಿಗೆ ಸಮಾನವಾದ ಹಕ್ಕು ಆ ದೇಶದ ಕಾನೂನಿನ ಅಡಿಯಲ್ಲಿ ಸಿಗಬೇಕು,” ಎಂದು ಈ ಸಂದರ್ಭದಲ್ಲೇ ತಾಲಿಬಾನ್ ವಕ್ತಾರ ಸುಹೈಲ್ ಶಾಹಿನ್ ಆಗ್ರಹ ಮಾಡಿದ್ದಾರೆ.






