ಕುಕ್ಕೆ, ಧರ್ಮಸ್ಥಳಕ್ಕೆ ಹೋಗುವ ಮುನ್ನ ಈ ಹೊಸ ನಿಯಮಗಳ ಬಗ್ಗೆ ತಿಳಿಯಿರಿ

0
80

ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ವರದಿಯಾಗುತ್ತಿರುವ ಕೇರಳ ಗಡಿಯನ್ನು ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರದ ಹಿನ್ನಲೆ, ಜಿಲ್ಲೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಮುಖ್ಯವಾಗಿ ಕೇರಳ ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೇರಳದಿಂದ ಜಿಲ್ಲೆಗೆ ಆಗಮಿಸುವ ಜನರಿಗೆ ಹಲವು ರೀತಿಯ ನಿರ್ಬಂಧಗಳನ್ನು ಹೇರುವ ಮೂಲಕ ಕೊರೊನಾ ತಡೆಯುವ ಪ್ರಯತ್ನದಲ್ಲಿ ನಿರತವಾಗಿದೆ.

 

ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಪ್ರಮುಖ ದೇವಸ್ಥಾನಗಳೆಂದು ಗುರುತಿಸಲ್ಪಟ್ಟಿರುವ ಹಲವು ಧಾರ್ಮಿಕ ಕ್ಷೇತ್ರಗಳಿದ್ದು, ಈ ಕ್ಷೇತ್ರಗಳಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿ ನೀಡುವ ಹಿನ್ನಲೆಯಲ್ಲಿ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹೊಸ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಿದೆ.

 

ಬೆಳಿಗ್ಗೆ 7 ರಿಂದ ರಾತ್ರಿ 7ರ ತನಕ ದರ್ಶನ

ಮುಖ್ಯವಾಗಿ ರಾಜ್ಯದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನಕ್ಕೆ ಅನ್ವಯಿಸುವಂತೆ ಈ ಮಾರ್ಗಸೂಚಿಯನ್ನು ಹೊರಡಿಲಾಗಿದೆ. ಈ ಮೂರೂ ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಬೆಳಿಗ್ಗೆ 7 ರಿಂದ ರಾತ್ರಿ 7ರ ತನಕ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳು ದೇವರ ದರ್ಶನ, ತೀರ್ಥ, ಪ್ರಸಾದ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಬಹುದು. ಮುಂದಿನ ಆದೇಶದವರೆಗೆ ಅವಕಾಶ ನೀಡಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶ ನೀಡಿಲ್ಲ.

ದೇವಸ್ಥಾನಗಳಲ್ಲಿರುವ ವಸತಿ ಗೃಹಗಳಲ್ಲಿ ಭಕ್ತಾಧಿಗಳು ತಂಗಲು ಅವಕಾಶವನ್ನು ನಿರಾಕರಿಸಲಾಗಿದ್ದು, ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ವಾರಾಂತ್ಯದ ಶನಿವಾರ ಹಾಗೂ ಭಾನುವಾರದಂದು ಭಕ್ತಾಧಿಗಳಿಗೆ ದೇವಸ್ಥಾನಗಳ ದರ್ಶನದ ಅವಕಾಶವನ್ನು ನಿರಾಕರಿಸಲಾಗಿದೆ.
ಶನಿವಾರ ಮತ್ತು ಭಾನುವಾರಗಳಂದು ಎಲ್ಲ ರೀತಿಯ ಉತ್ಸವ, ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆ, ವಸತಿಗಳನ್ನು ನಿರ್ಬಂಧಿಸಿ ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

 

ಸಿಬ್ಬಂದಿಗಳಿಗೆ ಮಾತ್ರ ದೇವಸ್ಥಾನದಲ್ಲಿ ಇರಲು ಅವಕಾಶ

ವಾರಾಂತ್ಯದಲ್ಲಿ ದೇವಸ್ಥಾನದ ಅರ್ಚಕ ಹಾಗೂ ಸಿಬ್ಬಂದಿಗಳಿಗೆ ಮಾತ್ರ ದೇವಸ್ಥಾನದಲ್ಲಿ ಇರಲು ಅವಕಾಶ ನೀಡಲಾಗಿದೆ. ಅಲ್ಲದೆ ದೇವಸ್ಥಾನಗಳ ಉತ್ಸವ, ಮೆರವಣಿಗೆ ಹಾಗೂ ಜಾತ್ರೆಗಳನ್ನು ನಡೆಸಲು ಅವಕಾಶವನ್ನು ನಿರಾಕರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ನಿಯಂತ್ರಣದಲ್ಲಿಡುವ ಹಾಗೂ ಕೊರೊನಾ ಮೂರನೇ ಅಲೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಈ ಆದೇಶವನ್ನು ಹೊರಡಿಸಿದ್ದಾರೆ.
ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

 

 

LEAVE A REPLY

Please enter your comment!
Please enter your name here