ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಕೆಎಸ್ ಸಿಎ ಮನವಿ ಬಗ್ಗೆ ನಾವು ಮುಕ್ತ ಮನಸ್ಸಿನಲ್ಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧ ಹಾಗೂ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕೆಎಸ್ ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ನಿಮ್ಮನ್ನು ಭೇಟಿಯಾಗಿ ಸಲ್ಲಿಸಿರುವ ಮನವಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ,
“ಕೆಎಸ್ ಸಿಎ ನೂತನ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್ ಅವರು ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಅವರು ಮನವಿ ನೀಡಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರ್ಘಟನೆ ಆಗಬಾರದಿತ್ತು. ಆದರೂ ಆಗಿದೆ. ಅನೇಕ ತಪ್ಪುಗಳು ನಡೆದಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರತ್ಯೇಕ ಮಾರ್ಗಸೂಚಿ ಅನುಸಾರ ಜನ ಸಂದಣಿ ನಿಯಂತ್ರಣ ಮಾಡಬೇಕಾಗುತ್ತದೆ ಎಂದರು.
ಈ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಮುಕ್ತ ಮನಸ್ಸಿನಿಂದ ಇದ್ದೇನೆ. ನಮ್ಮ ರಾಜ್ಯದ ಗೌರವ ಹಾಳು ಮಾಡಿಕೊಳ್ಳುವುದು ಬೇಡ. ಈ ವಿಚಾರವನ್ನು ಸಚಿವ ಸಂಪುಟ ಸಭೆಯ ಮುಂದಿಟ್ಟು ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.






