ಕಳೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಐಪಿಎಲ್ ನಲ್ಲಿ ಮಿಂಚುವ ಮುನ್ಸೂಚನೆಯನ್ನು ನೀಡಿದ್ದರು. ಯುಎಇಯಲ್ಲಿ ಕಳೆದ ಬಾರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೃಥ್ವಿ ಶಾ ಭಾರೀ ಟೀಕೆಗೆ ಒಳಗಾಗಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ 2020ರ ಐಪಿಎಲ್ ಟೂರ್ನಿಯಲ್ಲಿ ಎದುರಾದ ಟೀಕೆಗಳಿಗೆ ಪೃಥ್ವಿ ಶಾ ಉತ್ತರವನ್ನು ನೀಡಿದ್ದರು. ಹಾಗೂ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಪೃಥ್ವಿ ಶಾ ಅಬ್ಬರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 38 ಎಸೆತಗಳಿಗೆ 72 ರನ್ ಬಾರಿಸಿದರು. ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಪೃಥ್ವಿ ಶಾ 3 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಸಿಡಿಸಿದ್ದರು. ಆದರೆ ಗುರುವಾರ ( ಏಪ್ರಿಲ್ 15 ) ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಆರಂಭಿಕ ಆಟಗಾರನಾಗಿ ಬಂದು 5 ಎಸೆತಗಳಿಗೆ ಕೇವಲ 2 ರನ್ ಗಳಿಸಿ ಜಯದೇವ್ ಉನಾದ್ಕತ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಪೃಥ್ವಿ ಶಾ ಐಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯೊಂದನ್ನು ಮತ್ತೆ ಮುಂದುವರಿಸಿದ್ದಾರೆ.
2019ರಿಂದ ಇಲ್ಲಿಯವರೆಗೂ ಅತಿಹೆಚ್ಚು ಬಾರಿ ಒಂದಂಕಿಗೆ ಔಟ್ ಆಗಿರುವ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಪೃಥ್ವಿ ಶಾ ಮತ್ತೊಂದು ಬಾರಿ ಒಂದಂಕಿಗೆ ಔಟ್ ಆಗುವ ಮೂಲಕ ತಮ್ಮ ಹಳೆಯ ಕೆಟ್ಟ ದಾಖಲೆಯನ್ನು ಮುಂದುವರೆಸಿದ್ದಾರೆ.