ಕೆನಡಾದಿಂದ ಚಂದನ್ ಕುಮಾರ್ ಪಾರ್ಥಿವ ಶರೀರ ಫೆ.16ಕ್ಕೆ ತಾಯ್ನಾಡಿಗೆ: ಡಾ.ಕೆ.ಸುಧಾಕರ್ ಮಾಹಿತಿ
ನೆಲಮಂಗಲ: ಕೆನಡಾದ ಟೊರಾಂಟೋ ನಗರದಲ್ಲಿ ಫೆಬ್ರವರಿ 7ರಂದು ನಡೆದ ಶೂಟೌಟ್ನಲ್ಲಿ ಹತ್ಯೆಗೀಡಾದ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ನಡೆದಿದ್ದ ಪ್ರಯತ್ನ ಫಲಕಾರಿಯಾಗಿದೆ.
ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಿಂದ ಇ-ಮೇಲ್ ಮೂಲಕ ಮಾಹಿತಿ ಲಭಿಸಿದ್ದು, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಫೆಬ್ರವರಿ 14ರಂದು ಟೊರಾಂಟೋದಿಂದ ಹೊರಟು ನವದೆಹಲಿಯ ಮೂಲಕ ಫೆಬ್ರವರಿ 16ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಂಗಳೂರಿಗೆ ತಲುಪಲಿದೆ ಎಂದು ತಿಳಿಸಲಾಗಿದೆ.
“ನೂರಾರು ವರ್ಷ ಬದುಕಬೇಕಿದ್ದ ಮಗನನ್ನು ಕಳೆದುಕೊಂಡ ಪೋಷಕರಿಗೆ ಜೀವವನ್ನು ಮರಳಿ ನೀಡಲು ಸಾಧ್ಯವಿಲ್ಲ. ಆದರೆ ಮಗನ ಅಂತಿಮ ದರ್ಶನ ಪಡೆದು, ತಮ್ಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಅವಕಾಶ ಒದಗಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೆ,” ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ Dr. K. Sudhakar ತಿಳಿಸಿದ್ದಾರೆ.
ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಕಾರ ನೀಡಿದ ಪ್ರಧಾನಿ Narendra Modi, ಕೇಂದ್ರ ವಿದೇಶಾಂಗ ಸಚಿವ S. Jaishankar, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಚಂದನ್ ಕುಟುಂಬದ ಪರವಾಗಿ ಹಾಗೂ ಕರ್ನಾಟಕದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ. “ಸಹೋದರ ಚಂದನ್ ಕುಮಾರ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ,” ಎಂದು ಸಂಸದರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.






