ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

0
138

ಈ ದಿನದಂದು ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆ: ಯಾವೆಲ್ಲೆಡೆ ಮಳೆ ಸಾಧ್ಯತೆ?

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಒಂದು ವಾರ ಕರ್ನಾಟಕದಾದ್ಯಂತ ಒಣಹವಾಮಾನ ಹಾಗೂ ಬಿಸಿಲಿನ ತಾಪಮಾನ ಮುಂದುವರಿಯಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುವ ಸಂಭವವಿದ್ದು, ದಿನಪೂರ್ತಿ ಸೆಖೆಯ ವಾತಾವರಣ ಇರಲಿದೆ.

ಆದರೆ ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರಾಜ್ಯದ ಕೆಲ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಬಹುದು. ವಾರದ ಕೆಲವು ದಿನಗಳಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ಬೆಂಗಳೂರು ನಗರದಲ್ಲಿ ಮಿಶ್ರ ಹವಾಮಾನ ಮುಂದುವರಿಯಲಿದೆ. ಹಗಲಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 34°C ರಿಂದ 36°C ವರೆಗೆ ಹಾಗೂ ಕನಿಷ್ಠ ತಾಪಮಾನ 21°C ರಿಂದ 23°C ನಡುವೆ ದಾಖಲಾಗುವ ನಿರೀಕ್ಷೆಯಿದೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಖರ ಬಿಸಿಲು ಹಾಗೂ ಶುಭ್ರ ಆಕಾಶ ಕಂಡುಬರುವ ಸಾಧ್ಯತೆ ಇದೆ. ನಂತರ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ನಗರದ ಕೆಲ ಪ್ರದೇಶಗಳಲ್ಲಿ ಮಳೆಯಾಗಬಹುದು. ಮಳೆಯ ಸಂದರ್ಭದಲ್ಲಿ ಗುಡುಗು, ಸಿಡಿಲು ಜೊತೆಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.