ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಕಳೆದ 48 ಗಂಟೆಗಳಿಂದ ಮಳೆಯು ವೇಗವನ್ನು ಪಡೆದುಕೊಂಡಿದ್ದು, ಕೆರೆ, ಕೊಳ್ಳ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಕೊಡಗು ಜಿಲ್ಲಾದ್ಯಂತ ವ್ಯಾಪಕ ಮಳೆ ಆಗುತ್ತಿದ್ದು, ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಸಣ್ಣ ಪ್ರಮಾಣದ ಭೂ ಕುಸಿತ ಸಂಭವಿಸಿದೆ.
ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದ್ದು, ಒಂದೇ ದಿನ ನೀರಿನ ಮಟ್ಟ ಮೂರು ಅಡಿ ಏರಿಕೆಯಾಗಿದೆ.
ಹಾರಂಗಿ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 2849.55 ಅಡಿಗಳಷ್ಟು ದಾಖಲಾಗಿದ್ದು, ಜಲಾಶಯ ಭರ್ತಿಯಾಗಲು 10 ಅಡಿಗಳಷ್ಟು ಬಾಕಿ ಇದೆ. ಜಲಾಶಯಕ್ಕೆ 7753 ಕ್ಯೂಸೆಕ್ಸ್‌ಗಳಷ್ಟು ನೀರು ಹರಿದು ಬರುತ್ತಿದೆ. ಹೊರಹರಿವು 405 ಕ್ಯೂಸೆಕ್ಸ್‌ಗಳಷ್ಟು ಇದೆ. ಇದೇ ರೀತಿ ಮಳೆಯಾದರೆ ಈ ವಾರಾಂತ್ಯದೊಳಗೆ ಜಲಾಶಯ ಭರ್ತಿ ಆಗಲಿದೆ.
ಪ್ರವಾಹದ ಸಾಧ್ಯತೆ ಇರುವ ಸ್ಥಳಗಳಿಗೆ ಮಂಗಳವಾರ ಮಡಿಕೇರಿ ಶಾಸಕ ಅಪ್ಪಚು ರಂಜನ್ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. “ಬಲುಮುರಿ ಗ್ರಾಮದ ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾಸಕ ಅಪ್ಪಚ್ಚು ರಂಜನ್ ನದಿ ಪಾತ್ರದ ಜನರ ಎಚ್ಚರಿಕೆಯಿಂದ ಇರುವಂತೆ,” ಹೇಳಿದರು.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಡಿಕೇರಿ ತಾಲೂಕಿನ ಬಲುಮುರಿಯ ಕಾವೇರಿ ನದಿಯ ನೀರಿನ ಒಳಹರಿವು ಹೆಚ್ಚಾಗಿದೆ. ಬಲುಮುರಿ ಸೇತುವೆ ಮುಳುಗಡೆಯಾಗಲೂ ಕೇವಲ ಎರಡು ಅಡಿ ಮಾತ್ರ ಬಾಕಿಯಿದೆ. ಕಾಳಜಿ ಕೇಂದ್ರಗಳ ವ್ಯವಸ್ಥೆ ಅಹಾರ ಪೂರೈಕೆ ಬಗ್ಗೆ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಸಿದೆ.