ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಏರಿಳಿತದ ನಡುವೆಯೂ ರಾಜ್ಯ ಸರ್ಕಾರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಒಂದಷ್ಟು ಮಾರ್ಗಸೂಚಿಗಳ ಜೊತೆ ಮುಕ್ತ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ವಾರಾಂತ್ಯಗಳಲ್ಲಿ ಕೊಡಗು ಜಿಲ್ಲೆಗೆ ಹೆಚ್ಚು ಪ್ರವಾಸಿಗರು ಅಗಮಿಸುತ್ತಿದ್ದಾರೆ.
ಇದರಿಂದ ಪ್ರವಾಸೋದ್ಯಮ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವವರು ಚೇತರಿಕೆ ಕಾಣ್ಣುತ್ತಿದ್ದರೆ, ಇದೀಗ ಕೊಡಗು ಜಿಲ್ಲೆಯ ಜನ ಎರಡು ತಿಂಗಳ ಕಾಲ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತ ಮಾಡಬೇಕೆಂದು ಆಗ್ರಹಿಸಿದ್ದಾರೆ. ಶುಕ್ರವಾರ ಕೊಡಗಿನ ಜನ, ವಿವಿಧ ಸಂಘಟನೆಗಳು ಹಾಗೂ ಸಮಾನ ಮನಸ್ಕರನ್ನು ಒಳಗೊಂಡ ‘ಸೇವ್ ಕೊಡಗು ಫ್ರಮ್ ಟೂರಿಸ್ಟ್’ ತಂಡ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ನೀಡಿದೆ.
ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಕೊಡಗಿನ ಸಾಂಪ್ರದಾಯಿಕ ಹಬ್ಬ ತುಲಾ ಸಂಕ್ರಮಣ ಆಚರಣೆಯ ಹಿತದೃಷ್ಟಿಯಿಂದ ಹಾಗೂ ಶಾಲಾ- ಕಾಲೇಜುಗಳ ಪುನರಾರಂಭದ ಹಿನ್ನೆಲೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಕಠಿಣ ನಿಯಮವನ್ನು ಜಾರಿಗೊಳಿಸಬೇಕೆಂದು ತಂಡ ಒತ್ತಾಯಿಸಿದೆ. ಗಡಿರಾಜ್ಯ ಕೇರಳದಲ್ಲಿ ಕೋವಿಡ್ ಹಾಗೂ ನಿಫಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗಿನ ಎಲ್ಲ ಗಡಿಗಳಿಂದಲೂ ಪ್ರವಾಸಿಗಳನ್ನು ಒಳಬಾರದಂತೆ ತಡೆಯಬೇಕು ಎಂದು ಒತ್ತಾಯಿಸಿದೆ. ಈ ಮೂಲಕ ಕೊಡಗು ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗದಂತೆ ತಡೆಯಬೇಕು ಎಂದು ಆಗ್ರಹಿಸಿದೆ.
ಕಳೆದ ಬಾರಿ ಕೊಡಗು ಜಿಲ್ಲಾಡಳಿತದ ವೈಫಲ್ಯದಿಂದ ತುಲಾ ಸಂಕ್ರಮಣದ ಸಂದರ್ಭ ಗೊಂದಲ ಉಂಟಾಗಿದ್ದು, ಕೊಡಗಿನ ಮೂಲ ನಿವಾಸಿಗಳಿಗೆ ಅತೀವ ನೋವುಂಟಾಗಿದೆ. ಈ ಬಾರಿ ಆ ರೀತಿ ಆಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಬೇಕು ಎಂದು ತಂಡ ಮನವಿ ಮಾಡಿಕೊಂಡಿದೆ.
ಕೊಡಗಿನ ಮೂಲ ನಿವಾಸಿಗಳಿಗೆ ಈ ಬಾರಿಯ ಹಬ್ಬದಲ್ಲಿ ಭಾಗಿಯಾಗಲು ಮುಕ್ತ ಅವಕಾಶ ಕೊಡಬೇಕು. ಹೊರಗಿನಿಂದ ಜಾತ್ರೆಗೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಮುಂಗಡ ಹೆಸರು ನೊಂದಾಯಿಸಿಕೊಂಡು, ಕೋವಿಡ್ ನೆಗೆಟಿವ್ ವರದಿಯೊಂದಿಗೆ ಭಾಗವಹಿಸಲು ಮಾತ್ರ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.