ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಚಾಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಭಾನುವಾರ ಕೊಲೆ ಸಂಭಂದಿತ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಛತ್ರಾಸಲ್ ಕ್ರೀಡಾಂಗಣದಲ್ಲಿ 23 ವರ್ಷದ ಯುವ ಕುಸ್ತಿಪಟು ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಸುಶೀಲ್ ಕುಮಾರ್ ಮೇಲಿದೆ. ಈ ಬಗ್ಗೆ ನ್ಯಾಯಾಲಯದ ಆವರಣದಲ್ಲೇ 30 ನಿಮಿಷಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು, ವಿಚಾರಣೆ ಸಲುವಾಗಿ 12 ತಿನಗಳ ಕಾಲ ಒಪ್ಪಿಸುವಂತೆ ನ್ಯಾಯಾಲಯದಲ್ಲಿ ಪೊಲೀಸರು ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ, ಅನುಭವಿ ಕುಸ್ತಿಪಟುವನ್ನು 6 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸುಶೀಲ್ ಜೊತೆಗೆ ಅಹ ಆರೋಪಿ ಅಜಯ್ ಎಂಬಾತನನ್ನೂ ಬಂಧಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಸುಶೀಲ್ ಕುಮಾರ್ ಮೂರು ವಾರಗಳಿಂದ ತಲೆ ಮರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸುಶೀಲ್ ಅವರನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ ದಿಲ್ಲಿ ಪೊಲೀಸರು ಘೋಷಿಸಿದ್ದರು ಕೂಡ.
ದಿಲ್ಲಿ ಪೊಲೀಸರ ಪ್ರಕಾರ ಸುಶೀಲ್ ಕುಮಾರ್ ಮತ್ತು ಅವರ ಬೆಂಬಲಿಗರು ಕ್ರೀಡಾಂಗಣದ ಒಳ ಪ್ರವೇಶಿಸಿ ಕುಸ್ತಿಪಟು ಸಾಗರ್ ಧಂಕರ್ ಮತ್ತು ಅವರ ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಾಗರ್ ನಂತರ ಕೊನೆಯುಸಿರೆಳೆದಿದ್ದಾರೆ.