ಬೆಂಗಳೂರು, ಅ. 04: ಕೊರೊನಾ ವೈರಸ್ ಸೃಷ್ಟಿಸಿದ್ದ ಆತಂಕವೇ ಹಾಗಿತ್ತು. ಸ್ವತಃ ಪ್ರಧಾನಿ ಮೋದಿ ಅವರೆ ಮೊದಲು ಜೀವ ಆಮೇಲೆ ಜೀವನ ಎಂಬ ಹೇಳಿಕೆ ನೀಡಿದ್ದರು. ಅದು ವೈರಸ್ ಸೃಷ್ಟಿಸಿದ್ದ ಭೀಕರತೆಗೆ ಸಾಕ್ಷಿಯಾಗಿತ್ತು. ಮುಂದುವರೆದ ದೇಶಗಳೇ ಕೋವಿಡ್ ಹೊಡೆತಕ್ಕೆ ಹೈರಾಣಾಗಿದ್ದವು. ಹೀಗಾಗಿ ದಾರಿಯಲ್ಲಿ ಬಿದ್ದು ಸತ್ತವರೆಷ್ಟೋ? ಕೊರೊನಾ ಹುಟ್ಟಿಸಿದ್ದ ಭಯದಿಂದಾಗಿ ಸೋಂಕಿನಿಂದ ಆಸ್ಪತ್ರೆಯಲ್ಲಿ ಮೃತಪಟ್ಟವರ ಅಂತಿಮ ಸಂಸ್ಕಾರವನ್ನೂ ಕೆಲವು ಕುಟುಂಬಸ್ಥರು ಮಾಡಲು ಮುಂದಾಗಿರಲಿಲ್ಲ. ಹೀಗಾಗಿ ವಿವಿಧ ಶವಾಗಾರಗಳಲ್ಲಿ ಅಲ್ಲಿ ಕೆಲಸ ನಿರ್ವಹಿಸುವವರೇ ಮಾಡಿ ಮುಗಿಸಿದ್ದರು.
ಬಳಿಕ ಮೃತರ ಚಿತಾಭಸ್ಮ ಹಾಗೂ ಅಸ್ಥಿಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿಯಲ್ಲಿ ವಿಸರ್ಜಿಸಿದ್ದರು. ಸರ್ಕಾರದ ವತಿಯಿಂದ ಮೃತರ ಅಂತ್ಯೋತ್ತರ ಕ್ರಿಯೆಗಳನ್ನು ಸಾಮೂಹಿಕವಾಗಿ ನಡೆಸಲಾಗಿತ್ತು. ಅಸ್ಥಿ ವಿಸರ್ಜನೆ ಬಳಿಕ ಸೋಮವಾರ ಮೃತರಿಗೆ ಪಿಂಡ ಪ್ರದಾನವನ್ನು ಕಂದಾಯ ಸಚಿವ ಆರ್. ಅಶೋಕ್ ಮಾಡಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರು, ಪಿತೃ ಪಕ್ಷದ ನಿಮಿತ್ತ ಕೊರೊನಾದಿಂದ ಮೃತಪಟ್ಟವರ ಪಿಂಡ ಪ್ರಧಾನವನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿರೋ ಗೋಸಾಯಿಘಾಟ್‌ನಲ್ಲಿ ಮಾಡಿದ್ದಾರೆ. ಆ ಮೂಲಕ ಆತ್ಮಗಳಿಗೆ ಮುಕ್ತಿ ಕಾರ್ಯವನ್ನು ಮಾಡಲಾಗಿದೆ. ಡಾ. ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮೃತರಿಗೆ ಹೆಡೆ ಪೂಜೆ, ಪಿಂಡ ಪ್ರಧಾನ. ವಿಷ್ಣು ಸಂಕಲ್ಪ, ಮೋಕ್ಷ ನಾರಾಯಣ ಬಲಿ ಪೂಜೆ, ಗಣಪತಿ ಪೂಜೆ, ಕಳಸ ಪೂಜೆ, ಪ್ರಾಯಶ್ಚಿತ್ತ ತಿಲಹೋಮ ಸೇರಿದಂತೆ ಹಲವು ಪೂಜೆಗಳನ್ನು ಮಾಡಲಾಗಿದೆ. ಪೂಜಾ ಕೈಂಕಾರ್ಯದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಅಶ್ವತಿ ಅವರು ಭಾಗಿಯಾಗಿದ್ದರು.