ಕೊರೊನಾ ಗೆದ್ದ ಪಂತ್; ಟೀಮ್‌ಗೆ ವಾಪಸ್

1
53

ಇಂಗ್ಲೆಂಡ್ ಪ್ರವಾಸದಲ್ಲಿ ಕೊರೊನಾವೈರಸ್‌ಗೆ ತುತ್ತಾಗಿದ್ದ ರಿಷಭ್ ಪಂತ್ ಚೇತರಿಸಿಕೊಂಡಿದ್ದು ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಸಂಪೂರ್ಣ ಕ್ವಾರಂಟೈನ್ ಪೂರೈಸಿದ ರಿಷಭ್ ಪಂತ್ ಈಗ ತಂಡದ ಬಯೋಬಬಲ್‌ಗೆ ಸೇರ್ಪಡೆಗೊಂಡಿದ್ದಾರೆ. ಡರ್ಹಾಮ್‌ನಲ್ಲಿ ಭಾರತೀಯ ತಂಡವನ್ನು ಕೂಡಿಕೊಂಡಿದ್ದಾರೆ ರಿಷಭ್ ಪಂತ್. ಈ ಮೂಲಕ ಐದು ಪಂದ್ಯಗಳ ಇಂಗ್ಲೆಂಡ್ ವಿರುದ್ಧದ ಸರಣಿಗೆ ರಿಷಭ್ ಪಂತ್ ಸಜ್ಜಾಗಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡಿದ ಬಳಿಕ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ವಿರಾಮದ ಅವಧಿಯನ್ನು ಪಡೆದುಕೊಂಡಿತ್ತು. ಈ ಅವಧಿಯಲ್ಲಿ ರಿಷಭ್ ಪಂತ್ ಜುಲೈ 8ರಂದು ಕೊರೊನಾವೈರಸ್‌ಗೆ ತುತ್ತಾಗಿದ್ದರು. ಹೀಗಾಗಿ ಅವರು ಐಸೋಲೇಶನ್‌ನಲ್ಲಿದ್ದು ಚಿಕಿತ್ಸೆಯನ್ನು ಪಡೆದಿದ್ದರು. ಯಾವುದೇ ಲಕ್ಷಣಗಳು ಇಲ್ಲದೆ ವೈರಸ್‌ಗೆ ತುತ್ತಾಗಿದ್ದ ಪಂತ್ ಈಗ ನಿಯಮದ ಪ್ರಕಾರ ಕೋವಿಡ್ ಐಸೋಲೇಶನ್‌ಅನ್ನು ಸಂಪೂರ್ಣಗೊಳಿಸಿದ್ದಾರೆ.
ರಿಷಭ್ ಪಂತ್ ತಂಡದ ಬಯೋಬಬಲ್‌ಗೆ ಸೇರ್ಪಡೆಯಾಗಿರುವ ವಿಚಾರವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ. “ಹಲೋ ರಿಷಭ್ ಪಂತ್ ತಂಡವನ್ನು ಮರಳಿ ಸೇರಿಕೊಂಡಿರುವುದಕ್ಕೆ ಸಂತಸವಾಗುತ್ತಿದೆ” ಎಂದು ಪಂತ್ ಅವರ ಫೋಟೋವನ್ನು ಹಂಚಿಕೊಂಡು ಬಿಸಿಸಿಐನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ತಂಡದ ಸಿಬ್ಬಂದಿ ದಯಾನಂದ್ ಗರಾನಿ ಜುಲೈ 14ರಂದು ಕೊರೊನಾವೈರಸ್‌ಗೆ ತುತ್ತಾಗಿದ್ದು ಅವರು ತಮ್ಮ ಕ್ವಾರಂಟೈನ್ ಪೂರೈಸುತ್ತಿದ್ದಾರೆ. ಇವರ ಹತ್ತಿರದ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧೀಮಾನ್ ಸಾಹಾ, ಯುವ ಆಟಗಾರ ಅಭಿಮನ್ಯು ಈಶ್ವರನ್ ಕೂಡ ಪ್ರತ್ಯೇಕವಾಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ಆಗಸ್ಟ್ 4ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಡರ್ಹಾಮ್‌ನಲ್ಲಿ ಭಾರತೀಯ ತಂಡ ಈಗ ಮೂರು ದಿನಗಳ ಅಭ್ಯಾಸಪಂದ್ಯವನ್ನು ಆಡುತ್ತಿದೆ. ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತೀಯ ತಂಡ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯ ಭಾಗವಾಗಿರಲಿದೆ.

1 COMMENT

LEAVE A REPLY

Please enter your comment!
Please enter your name here