ಕೊರೊನಾ ನಡುವೆ ಪರೀಕ್ಷೆ; ಒಬ್ಬ ಸತ್ರೂ ನೀವೇ ಕಾರಣ!

0
37

ಕೋವಿಡ್‌-19 ನಡುವೆಯೂ 12ನೇ ತರಗತಿ ಪರೀಕ್ಷೆಗೆ ಮುಂದಾಗಿರುವ ಆಂಧ್ರಪ್ರದೇಶ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಎಚ್ಚರಿಕೆ ನೀಡಿದೆ.
ಈ ಪರೀಕ್ಷೆಯಿಂದ ಯಾವುದೇ ಸಾವು ವರದಿಯಾದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದ್ದು, ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿತು. ಒಂದೊಮ್ಮೆ ಓರ್ವ ವಿದ್ಯಾರ್ಥಿ ಮೃತಪಟ್ಟರೂ ಆ ವಿದ್ಯಾರ್ಥಿ ಕುಟುಂಬಕ್ಕೆ 1 ಕೋಟಿ ರೂ. ನೀಡಬೇಕು ಎಂದು ಹೇಳಿದೆ.
ದೇಶದ ಎಲ್ಲ ರಾಜ್ಯಗಳು ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದ್ದರೂ ನೀವೇಕೆ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಇದೇ ವೇಳೆ ಆಂಧ್ರ ಸರ್ಕಾರವನ್ನು ಕೋರ್ಟ್‌ ಪ್ರಶ್ನಿಸಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟತೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕೊರೊನಾ ಎರಡನೇ ಅಲೆ ಕಾರಣದಿಂದ ಸ್ಥಗಿತಗೊಂಡಿರುವ 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಏಕರೂಪದ ಮೌಲ್ಯಮಾಪನ ವ್ಯವಸ್ಥೆ ಜಾರಿಗೊಳಿಸಲು ಭಾರತದ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ರಾಜ್ಯಗಳ ಬೋರ್ಡ್ ಪರೀಕ್ಷೆಗೆ ಏಕರೂಪ ಮೌಲ್ಯಮಾಪನ ಪದ್ಧತಿ ಬೇಡ ಎಂದಿರುವ ಘನ ನ್ಯಾಯಾಲಯ, ಮೌಲ್ಯಮಾಪನ ವ್ಯವಸ್ಥೆ ತೀರ್ಮಾನ ರಾಜ್ಯಗಳಿಗೆ ಬಿಟ್ಟ ನಿರ್ಧಾರ ಎಂದು ಅಭಿಪ್ರಾಯಪಟ್ಟಿದೆ.

ಕೊರೊನಾ ಆರಂಭವಾದಾಗಿನಿಂದ ಶೈಕ್ಷಣಿಕ ವ್ಯವಸ್ಥೆಗೆ ಅನೇಕ ಅಡೆತಡೆಗಳು ಎದುರಾಗಿದ್ದು, ಕಳೆದ ವರ್ಷವೂ ಪರೀಕ್ಷೆ ಆಯೋಜಿಸಲು ಭಾರೀ ಸಮಸ್ಯೆಯಾಗಿತ್ತು. ಆದರೆ, ತಡವಾಗಿಯಾದರೂ ಅನೇಕ ರಾಜ್ಯಗಳು ಪರೀಕ್ಷೆ ನಡೆಸುವ ಸಂಕಲ್ಪ ಮಾಡಿದ ಪರಿಣಾಮವಾಗಿ ಕೊರೊನಾ ಮೊದಲ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆಯೇ ಪರೀಕ್ಷೆ ನಡೆಸಲಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಕಳೆದ ವರ್ಷದಂತೆ ಧೈರ್ಯ ಮಾಡಿ ಮುನ್ನುಗ್ಗುವುದು ಕಷ್ಟವಿದೆ.
ಹೀಗಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ದ್ವಿತೀಯ ಪಿಯು ಪರೀಕ್ಷೆಯನ್ನೇ ರದ್ದಪಡಿಸಿ ಹಿಂದಿನ ಪರೀಕ್ಷೆ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದಾಗಿ ತಿಳಿಸಿವೆ.
ವಿಚಾರಣೆ ವೇಳೆ ಕೇರಳದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 11ನೇ ತರಗತಿ ಪರೀಕ್ಷೆ ನಡೆಸುವುದಾಗಿ ಅಲ್ಲಿನ ಸರ್ಕಾರ ಕೋರ್ಟ್‌ಗೆ ತಿಳಿಸಿದೆ. ಅರ್ಜಿದಾರರ ಪರ ವಕೀಲರು ಮಧ್ಯಪ್ರವೇಶಿಸಿದಾಗ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕೋವಿಡ್‌ 3ನೇ ಅಲೆ ತೀವ್ರವಾಗಿರುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕರು ಎಚ್ಚರಿಸಿದ್ದಾರೆ. ಹೀಗಾಗಿ ಆ ಸಮಯದಲ್ಲಿ ಪರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿದೆ.
28 ರಾಜ್ಯಗಳ ಪೈಕಿ 6 ರಾಜ್ಯಗಳು ಈಗಾಗಲೇ ಬೋರ್ಡ್‌ ಪರೀಕ್ಷೆಯನ್ನು ನಡೆಸಿದ್ದು, 18 ರಾಜ್ಯಗಳು ರದ್ದು ಮಾಡಿವೆ. ಆದರೆ ಅಸ್ಸಾಂ, ಪಂಜಾಬ್‌, ತ್ರಿಪುರಾ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಮಾತ್ರ ಪರೀಕ್ಷೆ ರದ್ದು ಮಾಡಿಲ್ಲ.

LEAVE A REPLY

Please enter your comment!
Please enter your name here