ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
“ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಇದುವರೆಗಿನ ಒಟ್ಟು ಲಸಿಕೆ ವಿತರಣೆ ಪ್ರಮಾಣದಲ್ಲಿ ಅಮೆರಿಕವನ್ನೂ ಹಿಂದಿಕ್ಕಿದೆ” ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಅಮೆರಿಕದಲ್ಲಿ ಇದುವರೆಗೂ 32,33,27,328 ಡೋಸ್‌ಗಳ ಕೊರೊನಾ ಲಸಿಕೆ ನೀಡಲಾಗಿದ್ದು, ಭಾರತದಲ್ಲಿ 32,36,63,297 ಡೋಸ್‌ಗಳ ಲಸಿಕೆ ವಿತರಣೆಯಾಗಿದೆ.
ಮಾಹಿತಿ ಪ್ರಕಾರ ಅಮೆರಿಕದಲ್ಲಿ 46.5% ವಯಸ್ಕರಿಗೆ ಎರಡು ಡೋಸ್‌ಗಳ ಲಸಿಕೆಯನ್ನು ನೀಡಲಾಗಿದೆ. ಆದರೆ ಭಾರತದಲ್ಲಿ, ಒಟ್ಟಾರೆ ಜನಸಂಖ್ಯೆಯಲ್ಲಿ 4% ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಅಮೆರಿಕದಲ್ಲಿ ಲಸಿಕೆ ನೀಡಲು ಆರಂಭವಾದ ತಿಂಗಳ ನಂತರ ಭಾರತದಲ್ಲಿ ಲಸಿಕಾ ಅಭಿಯಾನ ಆರಂಭವಾಗಿದೆ.
ಭಾನುವಾರ 17,21,268 ಡೋಸ್ ಲಸಿಕೆಗಳನ್ನು ನೀಡಲಾಗಿದ್ದು, ಇದುವರೆಗೂ 32,36,63,297 ಡೋಸ್‌ಗಳ ಲಸಿಕೆ ನೀಡಲಾಗಿದೆ.
ದೇಶದಲ್ಲಿ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ನಂತರ ಮೇ ತಿಂಗಳಿನ ಆರಂಭದಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಪ್ರಧಾನಿ ಮೋದಿ ಘೋಷಿಸಿದರು. ಇದೀಗ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಅಧ್ಯಯನಗಳು ನಡೆಯುತ್ತಿವೆ.
ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ ವಿ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ.