ರಿಷಭ್ ಪಂತ್ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದರು. ಹಾಗೂ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡು ಅದ್ಭುತವಾಗಿ ನಿಭಾಯಿಸಿದರು. ರಿಷಭ್ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಜಯಗಳಿಸಿ ಐಪಿಎಲ್ ನಿಲುಗಡೆಯಾದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಐಪಿಎಲ್ ಮುಂದೂಡಲ್ಪಟ್ಟ ಬಳಿಕ ರಿಷಭ್ ಪಂತ್ ಜೂನ್ 18ರಂದು ಇಂಗ್ಲೆಂಡ್‌ನಲ್ಲಿ ಶುರುವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಹಾಗೂ ತದನಂತರ ನಡೆಯುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಈ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಎಲ್ಲಾ ಆಟಗಾರರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಬಿಸಿಸಿಐ ಸೂಚನೆ ನೀಡಿದೆ.
ಹೀಗಾಗಿ ಈಗಾಗಲೇ ಕೆಲವು ಆಟಗಾರರು ಈಗಾಗಲೇ ಕೊರೊನಾ ಲಸಿಕೆ ಮೊದಲ ಡೋಸ್ ಪಡೆದಿದ್ದು, ಇದೀಗ ರಿಷಭ್ ಪಂತ್ ಕೂಡ ಗುರುವಾರ ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಂತ್ ‘ನಾನು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದೆ. ನೀವು ಲಸಿಕೆ ಪಡೆಯಲು ಅರ್ಹರಿದ್ದಾಗ ದಯವಿಟ್ಟು ಲಸಿಕೆ ಪಡೆದುಕೊಳ್ಳಿ, ಎಷ್ಟು ಬೇಗ ಲಸಿಕೆ ಪಡೆದುಕೊಳ್ಳುತ್ತೇವೋ ಅಷ್ಟು ಬೇಗ ಕೊರೊನಾ ಸೋಂಕನ್ನು ಸದೆಬಡಿಯಬಹುದು’ ಎಂದು ಬರೆದು ಕೊಳ್ಳುವುದರ ಮೂಲಕ ಸಂದೇಶವನ್ನು ನೀಡಿದ್ದಾರೆ.