ಕೊರೊನಾ ಲಸಿಕೆ ವಿತರಣೆಯಲ್ಲಿ ಹೊಸ ದಾಖಲೆ ಬರೆದ ಭಾರತ

0
34

ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತವು ಹೊಸ ದಾಖಲೆ ಬರೆದಿದೆ. ಕಳೆದ ವಾರವಷ್ಟೇ ಭಾರತದಲ್ಲಿ ಒಂದೇ ದಿನದಲ್ಲಿ 1 ಕೋಟಿ ಕೊರೊನಾ ಲಸಿಕೆ ವಿತರಣೆ ಮಾಡಲಾಗಿತ್ತು, ಇದೀಗ ಮತ್ತೊಂದು ದಾಖಲೆ ಸೃಷ್ಟಿಸಿದ್ದು ಮಂಗಳವಾರ ಸಂಜೆ 8 ಗಂಟೆಯವರೆಗೆ 1.21 ಕೋಟಿ ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 

ಆಗಸ್ಟ್ 27ರಂದು ಭಾರತದಲ್ಲಿ 1,08,99,699 ಕೊರೊನಾ ಲಸಿಕೆಯನ್ನು ನೀಡಲಾಗಿತ್ತು, ಇದುವರೆಗಿನ ಲಸಿಕೀಕರಣದಲ್ಲಿ ಇದು ಅತಿ ದೊಡ್ಡ ಸಂಖ್ಯೆಯಾಗಿತ್ತು. ಇದೀಗ ತನ್ನ ದಾಖಲೆಯನ್ನೇ ಭಾರತವು ಮುರಿದಿದೆ.

ರಾತ್ರಿ 8 ಗಂಟೆಯಷ್ಟೊತ್ತಿಗೆ ದೇಶದಲ್ಲಿ 1,21,99,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಒಟ್ಟು 18 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಜುಲೈಗಿಂತ ಶೇ.33ರಷ್ಟು ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ. ಜುಲೈನಲ್ಲಿ ಒಟ್ಟು 13.45 ಕೋಟಿ ಡೋಸ್‌ಗಳನ್ನು ನೀಡಲಾಗಿತ್ತು.

ಭಾರತದಲ್ಲಿ ಇದುವರೆಗೆ 50 ಕೋಟಿ ಮಂದಿ ಮೊದಲ ಡೋಸ್ ಪಡೆದಿದ್ದು, 15 ಕೋಟಿ ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಒಟ್ಟು ಇದುವರೆಗೆ 65 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದಲ್ಲಿ ನೀಡಲಾದ ಕೊರೊನಾ ಲಸಿಕೆಗಿಂತ ಮೂರು ಪಟ್ಟು ಹೆಚ್ಚು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ. ಕಳೆದ ಒಂದು ವಾರದಿಂದ ನಿತ್ಯ 74 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನ್ಯೂಜಿಲೆಂಡ್‌ಗಿಂತಲೂ ಎರಡು ಪಟ್ಟು ಲಸಿಕೆಯನ್ನು ಭಾರತದಲ್ಲಿ ನೀಡಲಾಗಿದೆ.

ಪಾಕಿಸ್ತಾನದಲ್ಲಿ ನೀಡಲಾಗಿರುವ ಕೊರೊನಾ ಲಸಿಕೆಗಿಂತಲೂ ಹೆಚ್ಚು ಲಸಿಕೆಯನ್ನು ಉತ್ತರ ಪ್ರದೇಶ ಒಂದೇ ರಾಜ್ಯದಲ್ಲಿ ನೀಡಲಾಗಿದೆ. ಪಾಕಿಸ್ತಾನ, ಜರ್ಮನಿ, ಯುಕೆ, ಫ್ರಾನ್ಸ್‌, ರಷ್ಯಾ, ಇಟಲಿ, ಸ್ಪೇನ್ ಹಾಗೂ ಆಸ್ಟ್ರೇಲಿಯಾದಲ್ಲಿ ನೀಡಲಾಗಿರುವ ಕೊರೊನಾ ಲಸಿಕೆಗಿಂತ ಹೆಚ್ಚು ಲಸಿಕೆಯನ್ನು ಭಾರತದಲ್ಲಿ 10 ರಾಜ್ಯಗಳಲ್ಲಿ ನೀಡಲಾಗಿದೆ.

 

ಹಿಮಾಚಲಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಆಗಸ್ಟ್ 31ರವರೆಗೆ ಉತ್ತರ ಪ್ರದೇಶದಲ್ಲಿ 12 ಲಕ್ಷಕ್ಕೂ ಅಧಿಕ ಕೊರೊನಾ ಲಸಿಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here