ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ನಿಂದ ಹಿಂದೆ ಸರಿಯುವ ಬಗ್ಗೆ ಘೋಷಣೆ ಮಾಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದ ಸಂತಸದಲ್ಲಿದ್ದ ಡೆಲ್ಲಿ ತಂಡಕ್ಕೆ ಅಶ್ವಿನ್ ನಿರ್ಧಾರ ಶಾಕ್ ನೀಡಿದೆ.
ನಾನು ನಾಳೆಯಿಂದ ಐಪಿಎಲ್ ಆಡುತ್ತಿಲ್ಲ. ನನ್ನ ಕುಟುಂಬ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಸಂಕಷ್ಟದಲ್ಲಿ ಅವರ ಜೊತೆ ನಾನಿರಬೇಕು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾದ್ರೆ ಮತ್ತೆ ಅಂಗಳಕ್ಕೆ ಬರಲಿದ್ದೇನೆ ಎಂದು ಅಶ್ವಿನ್ ಟ್ವೀಟ್ ಮೂಲಕ ಆಟದಿಂದ ದೂರ ಉಳಿಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ಫಾಸ್ಟ್ ಬೌಲರ್ ಅಂಡ್ರ್ಯೂ ಟೈ ಸಹ ಐಪಿಎಲ್ ಟೂರ್ನಮೆಂಟ್ ನಿಂದ ಹಿಂದೆ ಸರಿದಿದ್ದಾರೆ. ಇನ್ನು ಲಿಯಮ್ ಲಿವಿಂಗ್‍ಸ್ಟೋನ್ ಸಹ ಪಂದ್ಯದಿಂದ ಹೊರ ಬಂದಿದ್ದಾರೆ. ಕೊರೊನ ಸ್ಫೋಟದ ಹಿನ್ನೆಲೆ ಆಸ್ಟ್ರೇಲಿಯಾದ ಇನ್ನಿಬ್ಬರು ಆಟಗಾರರು ಪಂದ್ಯ ದೂರ ಉಳಿಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಾಂಚೈಸಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಆಟಗಾರರು, ಅನುಮತಿ ಸಿಕ್ಕ ಬೆನ್ನಲ್ಲೇ ತವರಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.
ಸೂಪರ್ ಓವರ್ ನಲ್ಲಿ ಡೆಲ್ಲಿಗೆ ರೋಚಕ ಜಯ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿದೆ. ಗೆಲ್ಲಲು 160 ರನ್‍ಗಳ ಸವಾಲನ್ನು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸೂಪರ್ ಓವರ್‍ನಲ್ಲಿ ಡೆಲ್ಲಿ ಗೆದ್ದ ಪರಿಣಾಮ ಅಂಕಪಟ್ಟಿಯಲ್ಲಿ 8 ಅಂಕಗಳಿಸಿ ಬೆಂಗಳೂರು ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಎರಡನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್ 7ನೇ ಸ್ಥಾನದಲ್ಲೇ ಮುಂದುವರಿದಿದೆ.