ವಿರಾಟ್ ಕೊಹ್ಲಿ ..ಸದ್ಯ ವಿಶ್ವಕ್ರಿಕೆಟನ್ನೇ ಆಳುತ್ತಿರುವ ಬ್ಯಾಟಿಂಗ್ ತಾರೆ. ಟೀಮ್ ಇಂಡಿಯಾ ನಾಯಕನಾಗಿರುವ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಬಹುತೇಕ ದಾಖಲೆಗಳನ್ನು ಪುಡಿಗಟ್ಟಬಲ್ಲವರೆಂದೇ ಬಿಂಬಿಸಲಾಗಿದೆ. ರನ್ ಮಷಿನ್ ಆಗಿರುವ ಕೊಹ್ಲಿ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಒಂದಲ್ಲ ಒಂದ್ ರೆಕಾರ್ಡ್ ಮಾಡುತ್ತಿದ್ದಾರೆ. ಕೊಹ್ಲಿ ಬ್ಯಾಟ್ ಹಿಡಿದು ಕ್ರೀಸ್ ಗೆ ಬಂದರೆ ಸಾಕು ಅಭಿಮಾನಿಗಳಲ್ಲಿ ಪುಳಕ, ಎದುರಾಳಿಗಳಲ್ಲಿ ನಡುಕ!
ಕೊಹ್ಲಿ ನಾಯಕನಾಗಿ ಯಶಸ್ಸು ಕಾಣುವಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾತ್ರ ಬಹುಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ ಅಂಗಳದಲ್ಲಿ ಧೋನಿ ಸಲಹೆ ಪಡೆದೇ ಮುಂದಡಿ ಇಡುವುದು ಹೆಚ್ಚು ಎಂಬುದು ಜಗಜ್ಜಾಹಿರ. ಆದರೆ ನಿಮಗಿದು ಗೊತ್ತೇ ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಅಂದು ನಾಯಕರಾಗಿದ್ದ ಧೋನಿಯೇ ಹಿಂದೇಟು ಹಾಕಿದ್ದರಂತೆ..!
ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ದಿಲೀಪ್ ವೆಂಗ್ ಸರ್ಕಾರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2008 ರಲ್ಲಿ ಐಸಿಸಿ ಅಂಡರ್ 19 ವಿಶ್ವಕಪ್ ಅನ್ನು ಭಾರತ ಕೊಹ್ಲಿ ನೇತೃತ್ವದಲ್ಲಿ ಗೆದ್ದಿತ್ತು.ಕೊಹ್ಲಿ ಆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಮ್ ಇಂಡಿಯಾ ಕದ ತಟ್ಟಿದ್ದರು. ಅಂದು ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ದಿಲೀಪ್ ವೆಂಗ್ ಸರ್ಕಾರ್ ಕೊಹ್ಲಿ ಹೆಸರನ್ನು ಪ್ರಸ್ತಾಪಿಸಿದ್ದರು.ಆದರೆ ಆಗಿನ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ವಿರಾಟ್ ಕೊಹ್ಲಿ ಬದಲಿಗೆ ಸುಬ್ರಹ್ಮಣ್ಯಂ ಬದ್ರಿನಾಥ್ ( ಎಸ್ ಬದ್ರಿನಾಥ್) ಅವರನ್ನು ಆಯ್ಕೆ ಮಾಡುವ ಮನಸ್ಸು ಮಾಡಿದ್ದರಂತೆ. ಧೋನಿ, ಶ್ರೀನಿವಾಸನ್ ಅಲ್ಲದೆ ಅಂದಿನ ಕೋಚ್ ಗ್ಯಾರಿ ಕಸ್ಟರ್ನ್ ಕೂಡ ಕೊಹ್ಲಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರಂತೆ.
ಆದರೆ ದಿಲೀಪ್ ವೆಂಗ್ ಸರ್ಕಾರ್ ಶ್ರೀಲಂಕಾ ವಿರುದ್ಧದ ಸರಣಿಗೆ ಕೊಹ್ಲಿಯನ್ನು ಆಯ್ಕೆ ಮಾಡಿಯೇ ಬಿಟ್ಟಿದ್ದರು..! ವಿರೋಧದ ನಡುವೆಯೂ ಕೊಹ್ಲಿ ಆಯ್ಕೆ ಮಾಡಿದ್ದಕ್ಕೆ ಆಯ್ಕೆದಾರರಾಗಿದ್ದ ವೆಂಗ್ ಸರ್ಕಾರ್ ಅವರನ್ನು ಎರಡೇ ವರ್ಷಕ್ಕೆ ವಜಾಮಾಡಿ ಕೆ. ಶ್ರೀಕಾಂತ್ ಅವರನ್ನು ಆಯ್ಕೆ ಮಾಡಲಾಯಿತು..! ಈ ಎಲ್ಲಾ ವಿಚಾರ ಯಾರೋ ಹೇಳಿದ ಅಂತೆ- ಕಂತೆ ಸುದ್ದಿಯಲ್ಲ. ಸ್ವತಃ ವೆಂಗ್ ಸರ್ಕಾರ್ ಅವರೇ ಇವೆಲ್ಲವನ್ನು ಹಿಂದೊಮ್ಮೆ ಹೇಳಿಕೊಂಡಿದ್ದರು.