ಇಂಡಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿ ಇದೇ ಏಪ್ರಿಲ್ 9ರಿಂದ ಆರಂಭವಾಗುತ್ತಿದ್ದು ಮೊದಲನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಕನ್ನಡಿಗ ರಾಬಿನ್ ಉತ್ತಪ್ಪ ಇದೇ ಮೊದಲ ಬಾರಿಗೆ ಚೆನ್ನೈ ಜರ್ಸಿ ತೊಟ್ಟು ಐಪಿಎಲ್ ಆಡಲಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರಾಬಿನ್ ಉತ್ತಪ್ಪ ಆಡಿದ್ದರು.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಮಾತನಾಡಿರುವ ರಾಬಿನ್ ಉತ್ತಪ್ಪ ಅವರು ನೂತನ ದಾಖಲೆಯೊಂದನ್ನು ನಿರ್ಮಿಸಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೌದು ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಆಟವನ್ನು ಆಡಬೇಕೆಂಬ ಯೋಜನೆಯಲ್ಲಿರುವ ರಾಬಿನ್ ಉತ್ತಪ್ಪ ಈ ಬಾರಿಯ ಆವೃತ್ತಿಯಲ್ಲಿ 1000 ರನ್ ಗಳಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೊಸ ರೆಕಾರ್ಡ್ ನಿರ್ಮಿಸಬೇಕು ಎಂದು ಹೇಳಿಕೊಂಡಿದ್ದಾರೆ.
ಈ ಮೂಲಕ ಈ ಹಿಂದೆ 2016ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 973 ರನ್ ಗಳಿಸಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಲು ರಾಬಿನ್ ಉತ್ತಪ್ಪ ಸಜ್ಜಾಗಿದ್ದಾರೆ.
ಈ ಬಾರಿ 1000 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಬೇಕು ಎಂದು ಇಂಗಿತವನ್ನು ವ್ಯಕ್ತ ಪಡಿಸಿರುವ ರಾಬಿನ್ ಉತ್ತಪ್ಪ ಅವರು 2020ರ ಐಪಿಎಲ್ ನಲ್ಲಿ 12 ಇನಿಂಗ್ಸ್ ಆಡಿ 196 ರನ್ ಗಳಿಸಿ ಕಳಪೆ ಪ್ರದರ್ಶನವನ್ನು ನೀಡಿದ್ದರು.