ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್
ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದಲ್ಲಿ ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಹಸ್ತಕ್ಷೇಪ ಮಾಡಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಪಿಣರಾಯಿ ವಿಜಯನ್ ರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬೆಂಗಳೂರಿನ ವಿಚಾರ ಏನು ಎಂದು ಅವರು ತಿಳಿಯಬೇಕು. ಈ ಜಾಗ ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಪಿಟ್ ಆಗಿದೆ.
ಈ ಪ್ರದೇಶದಲ್ಲಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿವೆ. ಕೆಲವರು ಕಾನೂನುಬಾಹಿರವಾಗಿ ಆ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ನಮಗೂ ಮಾನವೀಯತೆ ಇದೆ. ಅವರಿಗೆ ಬೇರೆ ಜಾಗಗಳಿಗೆ ಹೋಗಲು ಸರ್ಕಾರ ಹಾಗೂ ಸ್ಥಳೀಯ ಶಾಸಕರು ಅವಕಾಶ ನೀಡಿದ್ದೆವು. ಅಲ್ಲಿದ್ದವರ ಪೈಕಿ ಕೆಲವರು ಮಾತ್ರ ಸ್ಥಳೀಯರಾಗಿದ್ದು ಉಳಿದವರು ಏಕಾಏಕಿ ಅತಿಕ್ರಮಣ ಮಾಡಿದ್ದಾರೆ.
ಇದು ಘನತ್ಯಾಜ್ಯ ವಿಲೇವಾರಿ ಘಟಕವಾಗಿದ್ದು 9 ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ. ಪಿಣರಾಯಿ ಅವರಂತಹ ನಾಯಕರು ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಅವರಲ್ಲಿ ಯಾರೆಲ್ಲಾ ಅರ್ಹರಿದ್ದಾರೆ, ಅವರಿಗೆ ರಾಜೀವ್ ಗಾಂಧಿ ಯೋಜನೆಯಲ್ಲಿ ಮನೆಗಳನ್ನು ನೀಡಲು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.






