ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ
ಬೆಳಗಾವಿ: ಬೆಂಗಳೂರು ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಯೂಟರ್ನ್ ಹೊಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರವಾಗಿ ಟೀಕಿಸಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನೀತಿಯಿಂದ ರಾಜ್ಯದ ಜನರಲ್ಲಿ ಅಸಮಾಧಾನ ತೀವ್ರವಾಗಿದ್ದು, ದಂಗೆ ಏಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಜನವರಿ 5ರಂದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಡ್ರಗ್ ಮಾಫಿಯಾ, ಕನ್ನಡಿಗರಿಗೆ ಆಗುತ್ತಿರುವ ಅಪಮಾನ, ಗೃಹಲಕ್ಷ್ಮಿ ಯೋಜನೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ಚರ್ಚೆ ನಡೆಸಿ, ರಾಜ್ಯಾದ್ಯಂತ ಹೋರಾಟ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿಯ ಮನೆಗಳನ್ನು ನೀಡುವ ನಿರ್ಧಾರವನ್ನು ಮುಖ್ಯಮಂತ್ರಿ ಘೋಷಿಸಿರುವುದು ಸರಿಯಲ್ಲ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ನೀತಿ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತಿರುವ ಕೇರಳ ಮೂಲದ ಕೆ.ಸಿ. ವೇಣುಗೋಪಾಲ್ ತೀರ್ಮಾನಿಸಬೇಕೇ, ಅಥವಾ ರಾಜ್ಯದ ಮುಖ್ಯಮಂತ್ರಿಗಳೇ ತೀರ್ಮಾನಿಸಬೇಕೇ ಎಂದು ಪ್ರಶ್ನಿಸಿದರು.
ಬೈಯಪ್ಪನಹಳ್ಳಿಯ ಮನೆಗಳನ್ನು ಕನ್ನಡಿಗರು ಹಾಗೂ ಬಡವರಿಗಾಗಿ ನಿರ್ಮಿಸಲಾಗಿದೆ. ಹೈಕಮಾಂಡ್ ಭಯದಿಂದ ಕುರ್ಚಿ ಉಳಿಸಿಕೊಳ್ಳಲು ಮನಸೋಇಚ್ಛೆಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಕೈಗೊಂಡಿರುವ ಈ ನಿರ್ಧಾರಕ್ಕೆ ಕಾನೂನುಬದ್ಧ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು.
ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ವಲಸಿಗರಿಗೆ ಮನೆ ನೀಡುವುದಾಗಿ ಘೋಷಿಸಿರುವುದು ಕಾನೂನು ವಿರುದ್ಧ ಎಂದು ವಿಜಯೇಂದ್ರ ಹೇಳಿದರು. ಸಿಎಂ ಮತ್ತು ಡಿಸಿಎಂ ಅವರ ನಿರ್ಧಾರವೇ ಅಕ್ರಮವಾಗಿದ್ದು, ಇದು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಕಿಡಿಕಾರಿದರು. ರಾಜ್ಯದ ತೆರಿಗೆದಾರರ ಹಣದಿಂದ ನಿರ್ಮಿಸಲಾದ ಮನೆಗಳನ್ನು ಇಚ್ಛೆಯಂತೆ ಹಂಚಿಕೆ ಮಾಡುವ ಹಕ್ಕು ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು.






