ಕೋಗಿಲು ಲೇಔಟ್ ಅನಧಿಕೃತ ಮನೆ ನಿರ್ಮಾಣ ನಿಜ; ಬಿಬಿಎಂಪಿ ಜಾಗವೆಂದು ಕೃಷ್ಣ ಬೈರೇಗೌಡ ಸ್ಪಷ್ಟನೆ
ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ನಡೆದಿರುವುದು ನಿಜವಾಗಿದ್ದು, ಆ ಜಾಗವು ಬಿಬಿಎಂಪಿಗೆ ಸೇರಿದ್ದೇ ಹೊರತು ಕಂದಾಯ ಇಲಾಖೆಯ ಜಾಗವಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿದೇಶ ಪ್ರವಾಸ ಮುಗಿಸಿ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ಜಾಗವಾಗಲಿ ಅಥವಾ ಕಂದಾಯ ಇಲಾಖೆಯ ಜಾಗವಾಗಲಿ, ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಒತ್ತುವರಿ ತೆರವು ಕಾರ್ಯವು ಆಡಳಿತ ವ್ಯವಸ್ಥೆಯಲ್ಲಿನ ನಿರಂತರ ಪ್ರಕ್ರಿಯೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ಪ್ರತಿ ಶನಿವಾರವೂ ಇಂತಹ ತೆರವು ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು. ಸರ್ಕಾರಿ ಜಾಗ ಅಥವಾ ಬಿಬಿಎಂಪಿ ಜಾಗದಲ್ಲಿರುವ ಭೂಮಿಗೆ ಯಾವುದೇ ಕಾರಣಕ್ಕೂ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದು ಒಂದೇ ಪ್ರಕರಣವಲ್ಲ, ಇಂತಹ ಇನ್ನೂ ಹಲವು ಪ್ರಕರಣಗಳಿವೆ. ಸರ್ಕಾರಿ ಜಾಗವನ್ನು ರಕ್ಷಿಸುವ ಉದ್ದೇಶದಿಂದಲೇ ತೆರವು ಕಾರ್ಯ ಕೈಗೊಳ್ಳಲಾಗಿದೆ. ತೆರವಾದ ಜಾಗದಲ್ಲಿ ಬಹುಕಾಲದಿಂದ ವಾಸಿಸುತ್ತಿರುವ ಬಡವರು ಹಾಗೂ ಅರ್ಹರು ಇದ್ದಲ್ಲಿ, ಮಾನವೀಯ ದೃಷ್ಟಿಯಿಂದ ಅವರಿಗೆ ಮನೆ ನೀಡುವ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.






