ನವದೆಹಲಿ, ಜೂ.12: ದೇಶಾದ್ಯಂತ ಲಸಿಕೆ ಕೊರತೆ ವರದಿಯಾಗುತ್ತಿರುವ ಸಮಯದಲ್ಲಿ, ಕಳೆದ ತಿಂಗಳು ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಶೇ. 17 ರಷ್ಟು ಡೋಸ್ ಮಾತ್ರ ಬಳಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮೇ ತಿಂಗಳಿನಲ್ಲಿ 1.29 ಕೋಟಿ ಲಸಿಕೆ ಡೋಸ್ ಲಭ್ಯವಾಗಿದ್ದು ಈ ಪೈಕಿ ಕೇವಲ 22 ಲಕ್ಷ ಮಾತ್ರ ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಪ್ರಕಾರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಬಳಕೆಯಾಗದ ಲಸಿಕೆ ದಾಸ್ತಾನು ಹಾಗೆಯೇ ಇದೆ ಎಂಬುದು ಸ್ಪಷ್ಟವಾಗಿದೆ.
ಆರೋಗ್ಯ ಸಚಿವಾಲಯವು ಜೂನ್ 4 ರಂದು ಪತ್ರಿಕಾ ಪ್ರಕಟಣೆ ನೀಡಿದ್ದು, ಈ ಪ್ರಕಟಣೆಯ ಪ್ರಕಾರ ಮೇ ತಿಂಗಳಲ್ಲಿ ದೇಶಾದ್ಯಂತ ಒಟ್ಟು 7.4 ಕೋಟಿ ಡೋಸ್‌ಗಳು ಲಭ್ಯವಾಗಿದ್ದು ಈ ಪೈಕಿ 1.85 ಕೋಟಿ ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗಿದೆ. ಭಾರತದಾದ್ಯಂತ ಖಾಸಗಿ ಆಸ್ಪತ್ರೆಗಳು ಲಭ್ಯವಿರುವ 1.85 ಕೋಟಿ ಡೋಸ್‌ಗಳ ಪೈಕಿ 1.29 ಕೋಟಿ ಲಸಿಕೆ ಡೋಸ್‌ಗಳನ್ನು ಸಂಗ್ರಹ ಮಾಡಿಕೊಂಡಿದೆ. ಇನ್ನು ಇದೇ ಪ್ರಕಟಣೆಯಲ್ಲಿ ಕೇವಲ 22 ಲಕ್ಷ ಪ್ರಮಾಣವನ್ನು ಮಾತ್ರ ಖಾಸಗಿ ಆಸ್ಪತ್ರೆಗಳು ಬಳಸಿದೆ ಎಂದು ತಿಳಿಸಲಾಗಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬೆಲೆ ಹಾಗೂ ಲಸಿಕೆಯ ಬಗ್ಗೆ ಹೊಂದಿರುವ ಆತಂಕವು ಜನರು ಲಸಿಕೆ ಪಡೆಯದಿರಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಪರ್ಯಾಸವೆಂದರೆ, ಶೇಕಡಾ 7.5 ರಷ್ಟು ಡೋಸ್‌ಗಳನ್ನು ಮಾತ್ರ ಬಳಸಲಾಗುತ್ತಿದೆ ಎಂಬ ಮಾಧ್ಯಮದ ವರದಿಯನ್ನು ಈ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಲಾಗಿದೆ.
“ಕೆಲವು ಮಾಧ್ಯಮ ವರದಿಗಳು ಖಾಸಗಿ ಆಸ್ಪತ್ರೆಗಳಿಗೆ ಶೇ. 25 ಡೋಸ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿದೆ, ಆದರೆ ಅವು ಒಟ್ಟು ಡೋಸ್‌ಗಳಲ್ಲಿ ಶೇ. 7.5 ಮಾತ್ರ ಖಾಸಗಿ ಆಸ್ಪತ್ರೆ ಹೊಂದಿದೆ. ಈ ವರದಿಗಳು ನಿಖರವಾಗಿಲ್ಲ ಮತ್ತು ಲಭ್ಯವಿರುವ ಮಾಹಿತಿಯೊಂದಿಗೆ ಹೊಂದಿಕೆಯಾಗುವುದಿಲ್ಲ” ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.