ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ವಿಶ್ವಕಪ್ ಹಬ್ಬ ಶುರುವಾಗಲಿದೆ. ಈ ನಡುವೆ ಯಾರಿಗೆಲ್ಲಾ ಕೊನೆಯ ವಿಶ್ವಕಪ್ ಆಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಭಾರತಕ್ಕೆ 2007 ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ತಂದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲಿಗಿದು ಕೊನೆಯ ವಿಶ್ವಕಪ್. ಈಗಾಗಲೇ ಟೆಸ್ಟ್ ಗೆ ವಿದಾಯ ಹೇಳಿರುವ ಮಾಹಿ ಮುಂದಿನ ವರ್ಲ್ಡ್ ಕಪ್ ಗೆ ಟೀಮ್ ಇಂಡಿಯಾದಲ್ಲಿ ಇರುವುದಿಲ್ಲ.
ವೆಸ್ಟ್ ಇಂಡೀಸ್ ನ ಹೊಡಿಬಡಿಯ ದಾಂಡಿಗ, ಟಿ20 ಸ್ಪೆಷಲಿಸ್ಟ್ ಕ್ರಿಸ್ ಗೇಲ್ ಅವರಿಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಈ ವಿಶ್ವಕಪ್ಪೇ ಕೊನೆಯ ವಿಶ್ವಕಪ್. 2 ಬಾರಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು ಕ್ರಿಸ್ ಗೇಲ್.
ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರಿಗೆ ಇದು ಲಾಸ್ಟ್ ವರ್ಲ್ಡ್ ಕಪ್. 15ವರ್ಷದ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸ್ಟೈನ್ ಗಾಯಗೊಂಡು ತಂಡದಿಂದ ದೂರ ಉಳಿದಿದ್ದ ದಿನಗಳೇ ಹೆಚ್ಚು ಎನ್ನಬಹುದು.
ಅದೇರೀತಿ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಸ್ಟಾರ್ ಆಟಗಾರ ಜೆಪಿ ಡುಮಿನಿ ಅವರಿಗೂ ಇದು ಕೊನೆಯ ವಿಶ್ವಕಪ್ ಆಗಲಿದೆ. ಪ್ರಸಿದ್ಧ ಆಲ್ ರೌಂಡರ್ ಡುಮಿನಿ ಟಿ20ಯಲ್ಲಿ ಮಾತ್ರ ಮುಂದುವರೆಯಲು ನಿರ್ಧರಿಸಿದ್ದು ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ ಮಾದರಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.
ಶ್ರೀಲಂಕಾದ ಸ್ಟಾರ್ ಬೌಲರ್, ವಿಚಿತ್ರ ಬೌಲಿಂಗ್ ಶೈಲಿಯಿಂದ ಗಮನ ಸೆಳೆದಿರುವ ಲಸಿತ್ ಮಾಲಿಂಗ ಅವರಿಗೂ ಈ ಬಾರಿಯ ವಿಶ್ವಕಪ್ ಕೊನೆಯ ವಿಶ್ವಕಪ್!
ದಕ್ಷಿಣ ಆಫ್ರಿಕಾದ ಬೌಲರ್ ಇಮ್ರಾನ್ ತಾಹಿರ್ ಅವರಿಗೂ ಕೂಡ ಇದೇ ಕೊನೆಯ ವಿಶ್ವಕಪ್ ಆಗಲಿದೆ.
ಪಾಕಿಸ್ತಾನದ ಆಲ್ ರೌಂಡರ್ ಶೋಯಭ್ ಮಲಿಕ್ ಅವರಿಗಿದು ಕೊನೆಯ ವಿಶ್ವಕಪ್. ಎರಡು ದಶಕಗಳಿಂದ ಪಾಕ್ ಪರ ಆಡುತ್ತಿದ್ದರೂ ಸ್ಥಾನ ಪಡೆದಿದ್ದು ಒಂದು ವಿಶ್ವಕಪ್ ನಲ್ಲಿ ಮಾತ್ರ. 2007ರ ವಿಶ್ವ ಕಪ್ ಟೂರ್ನಿಗೆ ಆಯ್ಕೆಯಾಗಿದ್ದರೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.
ಇವರುಗಳಲ್ಲದೆ,ಭಾರತದ ಶಿಖರ್ ಧವನ್, ಪಾಕ್ ನ ಮೊಹಮ್ಮದ್ ಹಫೀಜ್, ಆಸೀಸ್ ನ ಡೇವಿಡ್ ವಾರ್ನರ್, ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್, ಹಾಶಿಂ ಆಮ್ಲ, ಶೀಲಂಕಾದ ಮ್ಯಾಥ್ಯುಸ್ ಮೊದಲಾದವರಿಗೂ ಇದು ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದೆ.