ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ
ಬೆಂಗಳೂರು: ಇತ್ತೀಚೆಗೆ ರಸ್ತೆಯಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಘಟನೆಗಳು ಹೆಚ್ಚುತ್ತಿರುವ ನಡುವೆಯೇ, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೈಕೋ ಸಿಬ್ಬಂದಿಯೊಬ್ಬ ಮಹಿಳಾ ನರ್ಸ್‌ಗಳ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನಾಗರಬಾವಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸುವೆಂದು ಮೊಹಂತ ಎಂಬಾತ, ಮಹಿಳಾ ನರ್ಸ್‌ಗಳು ಬಟ್ಟೆ ಬದಲಿಸುವ ಸಂದರ್ಭಗಳಲ್ಲಿ ಅವರ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರೀಕರಿಸುತ್ತಿದ್ದಾನೆ ಎನ್ನಲಾಗಿದೆ. ಈ ಕೃತ್ಯವನ್ನು ಗಮನಿಸಿದ ನರ್ಸ್‌ವೊಬ್ಬರು ತಕ್ಷಣವೇ ವಿಷಯವನ್ನು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದಾರೆ.
ವಿಷಯ ತಿಳಿದ ಕೂಡಲೆ ಆಸ್ಪತ್ರೆಯ ವೈದ್ಯ ಡಾ. ಚೇತನ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಆರೋಪಿ ಸುವೆಂದು ಮೊಹಂತ ಕಳೆದ ಒಂದು ವರ್ಷದಿಂದ ಅದೇ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದನು ಎಂಬುದು ತಿಳಿದುಬಂದಿದೆ. ಅಲ್ಲದೆ, ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಮಹಿಳಾ ಸಹೋದ್ಯೋಗಿಗಳ ಅನೇಕ ಖಾಸಗಿ ಫೋಟೋ ಮತ್ತು ವೀಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.






