ಖಾಸಗಿ ಬಸ್ ಎಂಜಿನ್́ನಲ್ಲಿ ಹೊಗೆ: ತಪ್ಪಿದ ಭಾರೀ ಅನಾಹುತ
ಬಾಗಲಕೋಟೆ: ಬೆಂಗಳೂರಿನಿಂದ ರಾಜಸ್ಥಾನದ ಜೋಧಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಘಟನೆ ಇಳಕಲ್ ತಾಲೂಕಿನ ಗೂಡೂರು ಬಳಿ ಸಂಭವಿಸಿದೆ. ಬಿಆರ್ ಟ್ರಾವೆಲ್ಸ್‌ಗೆ ಸೇರಿದ ಬಸ್ ಸಂಚರಿಸುತ್ತಿದ್ದಾಗ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ.
ಸ್ಥಿತಿಗತಿಯನ್ನು ಗಮನಿಸಿದ ಚಾಲಕ ತಕ್ಷಣ ಬಸ್‌ನ್ನು ರಸ್ತೆಬದಿಗೆ ನಿಲ್ಲಿಸಿ, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ್ದಾನೆ. ಪ್ರಯಾಣಿಕರು ತಮ್ಮ ಲಗೇಜ್‌ಗಳೊಂದಿಗೆ ಬಸ್ಸಿನಿಂದ ಇಳಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆಯ ಬಳಿಕ ಇಳಕಲ್‌ನಿಂದ ಮೆಕ್ಯಾನಿಕ್‌ರನ್ನು ಸ್ಥಳಕ್ಕೆ ಕರೆಸಿ ಬಸ್ ರಿಪೇರಿ ಕೆಲಸ ಆರಂಭಿಸಲಾಗಿದೆ. ರಿಪೇರಿ ಯಶಸ್ವಿಯಾದರೆ ಬಸ್ ಮತ್ತೆ ಜೋಧಪುರಕ್ಕೆ ಪ್ರಯಾಣ ಮುಂದುವರಿಸಲಿದೆ. ಒಂದು ವೇಳೆ ರಿಪೇರಿ ಸಾಧ್ಯವಾಗದಿದ್ದರೆ, ಪ್ರಯಾಣಿಕರನ್ನು ಬೇರೊಂದು ಬಸ್ ಮೂಲಕ ಗಮ್ಯಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಆರ್ ಟ್ರಾವೆಲ್ಸ್ ಸಂಸ್ಥೆ ತಿಳಿಸಿದೆ. ಈ ಘಟನೆ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾದರೂ, ಪರಿಸ್ಥಿತಿ ಇದೀಗ ನಿಯಂತ್ರಣದಲ್ಲಿದೆ.






