ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ
ಬೆಂಗಳೂರು: ರಾಜಧಾನಿಯ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ನವವಿವಾಹಿತೆ ಗಾನವಿ ಅವರ ಆತ್ಮಹತ್ಯೆ ಪ್ರಕರಣ ಇದೀಗ ಮತ್ತೊಂದು ಗಂಭೀರ ತಿರುವು ಪಡೆದುಕೊಂಡಿದೆ. ಗಾನವಿ ಅವರ ಸಾವಿನ ಬೆನ್ನಲ್ಲೇ ಅವರ ಪತಿ ಸೂರಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇಷ್ಟಕ್ಕೇ ನಿಲ್ಲದೆ, ಮಹಾರಾಷ್ಟ್ರದ ನಾಗಪುರದಲ್ಲಿ ಸೂರಜ್ ಅವರ ತಾಯಿ ಜಯಂತಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾನವಿ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸಾಮಾಜಿಕವಾಗಿ ಸೂರಜ್ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸೂರಜ್ ಕುಟುಂಬವು ಬೆಂಗಳೂರು ತೊರೆದು ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿತ್ತು.
ಪತ್ನಿಯ ಸಾವಿನ ಬಳಿಕ ಸೂರಜ್ ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಗಾನವಿ ಅವರ ಆತ್ಮಹತ್ಯೆಗೆ ಪತಿ ಹಾಗೂ ಅವರ ಕುಟುಂಬದವರೇ ಕಾರಣ ಎಂಬ ಆರೋಪಗಳು ಮತ್ತು ಸಾರ್ವಜನಿಕ ಅವಮಾನವನ್ನು ತಾಳಲಾರದೆ ಸೂರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ನಾಗಪುರದಲ್ಲಿದ್ದಾಗಲೇ ಅವರು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾದ ತಾಯಿ ಜಯಂತಿ ನಾಗಪುರದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಮೊದಲು ಗಾನವಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಮಮೂರ್ತಿನಗರ ಪೊಲೀಸರು, ಇದೀಗ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣದ ಸ್ವರೂಪ ಸಂಪೂರ್ಣ ಬದಲಾಗಿದೆ. ಗಾನವಿ ಅವರ ಕುಟುಂಬವು ಸೂರಜ್ ಕುಟುಂಬದ ವಿರುದ್ಧ ನೀಡಿದ್ದ ದೂರಿನ ಹಿನ್ನೆಲೆ ಹಾಗೂ ಈಗ ಸಂಭವಿಸಿರುವ ಸರಣಿ ಆತ್ಮಹತ್ಯೆಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






