ಗಾಳಿ ಮಳೆ ನಡುವೆಯೇ ಮೆಸ್ಕಾಂ ನೌಕರನ ಧೈರ್ಯ: ಕಂಬ ಏರಿ ದುರಸ್ತಿ ಕಾರ್ಯ!
ಕಳಸ: ಭಾರೀ ಗಾಳಿ ಮಳೆ ಮಧ್ಯೆಯೂ ಮೆಸ್ಕಾಂ ನೌಕರರೊಬ್ಬರು ಎತ್ತರದ ಕಂಬ ಹತ್ತಿ ವಿದ್ಯುತ್ ದುರಸ್ಥಿ ಕಾರ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಜರುಗಿದೆ.
ಕಳಸ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಕೈ ಕೊಟ್ಟಿತ್ತು. ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಕಂಬಗಳಲ್ಲಿ ಸಮಸ್ಯೆ ಪದೇ ಪದೇ ತಲೆದೋರುವುದು ಸಾಮಾನ್ಯವಾಗಿದೆ. ವಿದ್ಯುತ್ ಇಲ್ಲದ ವಿಷಯ ಕರೆ ಮಾಡಿ ಮೆಸ್ಕಾಂ ಕಚೇರಿಗೆ ತಿಳಿಸಿದ ಕೆಲವೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ನೌಕರರೊಬ್ಬರು ಜೋರಾಗಿ ಸುರಿಯುವ ಮಳೆಯ ನಡುವೆಯೇ ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ಮಾಡಿದ್ದಾರೆ. ಅಲ್ಯೂಮಿನಿಯಂ ಏಣಿ ಏರಿ ವಿದ್ಯುತ್ ದುರಸ್ತಿ ನಡೆಸಿದ್ದಾರೆ. ನೌಕರನ ಶಿಸ್ತಿನ ಕಾರ್ಯಕ್ಕೆ ಕಳಸ ಪಟ್ಟಣದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.